ನನ್ನ ಟೈಮ್ ಚೆನ್ನಾಗಿ ಶುರುವಾಗಿದೆ ... ಈಗ ಇರುವುದರ ನೂರರಷ್ಟು ಆಸ್ತಿ ಮಾಡ್ಕೊತೀಯಾ..
ಬೆಂಗಳೂರು, ಮೇ 18: ರಾಜ್ಯದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್-ಜೆಡಿಎಸ್ ಹಾಗು ಬಿಜೆಪಿ ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿರುವ ನಡುವೆಯೇ ಬಿಜೆಪಿ ನಾಯಕ ಜನಾರ್ದನ ರೆಡ್ಡಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡರಿಗೆ ಭಾರೀ ಲಂಚದ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಸನಗೌಡರ ಜೊತೆ ಜನಾರ್ದನ ರೆಡ್ಡಿ ಮಾತುಕತೆ ಎನ್ನಲಾದ ಈ ಆಡಿಯೋದಲ್ಲಿ, "ಹಳೆದೂ.. ಕೆಟ್ಟ ಘಳಿಗೆಯಲ್ಲಿ ನಡೆಯಿತು. ಮರೆತು ಬಿಡಿ, ಇಲ್ಲಿ ನಿನ್ನ ಹತ್ರ ನೇರವಾಗಿ ದೊಡ್ಡವರು, ರಾಷ್ಟ್ರೀಯ ಅಧ್ಯಕ್ಷರೇ ಮಾತನಾಡುತ್ತಾರೆ. ನಿನಗೇ ಏನು ಬೇಕು, ಪದವಿ ಬೇಕು... ಕೇಳು. ನೀವು ನೂರರಷ್ಟು ಬೆಳೆಯಬೇಕು. ಶಿವನಗೌಡ ನಾಯಕ ನನ್ನ ಮಾತು ಕೇಳಿಬಂದು ಉದ್ಧಾರವಾಗಿದ್ದಾನೆ. ಕೊನೆಯವರೆಗೂ ಶಾಸಕನಾಗಿ ದುಡಿಯುತ್ತಾ ಇರಬಹುದು. ರಾಜೂಗೌಡ ಕೂಡ ನನ್ನಿಂದನೇ ಆಗಿದ್ದು. ನಮ್ಮ ಬ್ಯಾಡ್ ಟೈಮ್ ನಲ್ಲಿ ಹಾಗಾಗಿತ್ತು. ನೀನು ಇವತ್ತು ಮಂತ್ರಿಯಾಗಬಹುದು. ನೀವು ನೇರವಾಗಿ ದೊಡ್ಡವರ ಹತ್ರ ಒನ್ ಟು ವನ್ ಮಾತನಾಡಿಸ್ತೀನಿ. ನೀನು ಈಗ ಮಾಡಿಕೊಂಡಿರುವ ನೂರರಷ್ಟು ಆಸ್ತಿ ಮಾಡಿಕೊಳ್ಳಬಹುದು" ಎನ್ನುವ ಮಾತುಗಳಿವೆ. ಜನಾರ್ದನ ರೆಡ್ಡಿ ಬಸನಗೌಡರಿಗೆ ಆಮಿಷ ಒಡ್ಡಿರುವ ಆಡಿಯೋ ಇದು ಎನ್ನಲಾಗಿದೆ. ಇಷ್ಟೇ ಅಲ್ಲದೆ ಆಡಿಯೋದ ಆರಂಭದಲ್ಲಿ ಮಾತನಾಡುವ ವ್ಯಕ್ತಿ, "ಬಸನಗೌಡ ಸರ್.. ಜನಾರ್ದನ್ ಸರ್ ನಿಮ್ಮ ಜೊತೆ ಮಾತನಾಡಬೇಕಂತೆ" ಎಂದು ಹೇಳುವುದು ಕೇಳಿಸುತ್ತದೆ.
ಆದರೆ ಇದನ್ನು ಬಸನಗೌಡ ನಯವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದ್ದು, "ಸಾರಿ... ನಾನು ಕೊನೆಯ ಪರಿಸ್ಥಿತಿಯಲ್ಲಿದ್ದಾಗ ಟಿಕೆಟ್ ಕೊಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ದ್ರೋಹ ಮಾಡೋದಿಲ್ಲ. ನಿಮ್ಮ ಬಗ್ಗೆ ಗೌರವ ಅಭಿಮಾನವಿದೆ" ಎನ್ನುವುದು ಆಡಿಯೋದಲ್ಲಿದೆ.