ಬಿಜೆಪಿಗೆ ಹೋಗುವ ಮಾತೇ ಇಲ್ಲ: ಕಾಂಗ್ರೆಸ್ ಶಾಸಕ ರಾಜಶೇಖರ್ ಪಾಟೀಲ್
Update: 2018-05-18 19:57 IST
ಬೆಂಗಳೂರು, ಮೇ 18: ನನ್ನನ್ನು ಬಿಜೆಪಿಯಿಂದ ಯಾರೂ ಸಂಪರ್ಕಿಸಿಲ್ಲ. ನಾನು ಎಂದೆಂದಿಗೂ ಕಾಂಗ್ರೆಸ್ಸಿಗ. ಬಿಜೆಪಿಗೆ ಹೋಗುವ ಮಾತೇ ಇಲ್ಲವೆಂದು ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಸ್ಪಷ್ಟಪಡಿಸಿದರು.
ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಸಂಪರ್ಕದಲ್ಲಿದ್ದೇನೆಂಬುದು ಸುಳ್ಳು. ನನಗೆ ಆಗದವರು ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ. ಬಿಜೆಪಿಗೆ ಹೋಗುವ ಪ್ರಶ್ನೆ ಉದ್ಬವಿಸುವುದಿಲ್ಲ. ಹಲವು ಬಾರಿ ಕಾಂಗ್ರೆಸ್‌ನಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಮುಂದೆಯೂ ಕಾಂಗ್ರೆಸ್‌ನಲ್ಲಿಯೇ ಉಳಿಯಲಿದ್ದೇನೆ ಎಂದು ತಿಳಿಸಿದರು.
ಚುನಾವಣೆಗೂ ಮೊದಲು ನನ್ನ ವಿರುದ್ಧ ಇದೇ ರೀತಿಯಲ್ಲಿ ಆಪಾದನೆಗಳು ಬಂದಿದ್ದವು. ಮಾಧ್ಯಮಗಳಲ್ಲಿಯೂ ರಾಜಶೇಖರ್ ಪಾಟೀಲ್ ಬಿಜೆಪಿಗೆ ಹೋಗಲಿದ್ದಾರೆ ಎಂಬ ಗಾಳಿ ಸುದ್ದಿಯನ್ನು ಹಬ್ಬಿಸಿದ್ದರು. ಆಗಲೂ ಹೋಗಲಿಲ್ಲ. ಈಗಲೂ ಹೋಗಲ್ಲ. ಮುಂದೆಯೂ ಹೋಗುವುದಿಲ್ಲವೆಂದು ಅವರು ತಿಳಿಸಿದರು.