ಐತಿಹಾಸಿಕ ಸ್ಮಾರಕಗಳ ವಾಣಿಜ್ಯೀಕರಣ

Update: 2018-05-18 18:32 GMT

ದಾಲ್ಮಿಯಾ ಭಾರತ್ ಸಮೂಹವು ಕೆಂಪುಕೋಟೆಯನ್ನು ದತ್ತು ಪಡೆದುಕೊಳ್ಳುವುದರಲ್ಲಿ ಗುಪ್ತ ಹಿಂದುತ್ವ ಅಜೆಂಡಾವಿರುವ ಬಗ್ಗೆ ಶುಐಬ್ ದನಿಯಾಲ್ ಅವರು ಲೇಖನವೊಂದರಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ದಾಲ್ಮಿಯಾ ಅವರು ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ಧ್ವಂಸ ವಿವಾದದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಸರಕಾರದ ನೀತಿಯು ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಬಹುದು.


ಹಲವಾರು ಕ್ಷೇತ್ರಗಳ ಖಾಸಗೀಕರಣ ಇಂದು ಮಾಮೂಲು ವ್ಯವಹಾರವಾಗಿ ಬಿಟ್ಟಿದೆ. ರಸ್ತೆಗಳ ನಿರ್ಮಾಣ, ವಿದ್ಯುತ್ ಪೂರೈಕೆ, ಸಾರಿಗೆ ವ್ಯವಸ್ಥೆ ಇತ್ಯಾದಿಗಳನ್ನು ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಗುತ್ತಿಗೆದಾರರು, ಸಂಸ್ಥೆಗಳು, ಖಾಸಗಿ ವ್ಯಕ್ತಿಗಳಿಗೆ ಹಸ್ತಾಂತರಿಸಲಾಗಿದೆ. ತೀರ ಇತ್ತೀಚೆಗೆ ‘ಸ್ಮಾರಕ ದತ್ತು’ ಯೋಜನೆಯಡಿ ನಿರ್ವಹಣೆ ಮತ್ತು ಸೌಲಭ್ಯಗಳನ್ನು ಹೆಚ್ಚಿಸಲು ದಿಲ್ಲಿಯ ಇತಿಹಾಸ ಪ್ರಸಿದ್ಧ ಕೆಂಪುಕೋಟೆಯನ್ನು ದಾಲ್ಮಿಯಾ ಭಾರತ್ ಗುಂಪಿಗೆ ಹಸ್ತಾಂತರಿಸಲು ಸರಕಾರವು ನಿರ್ಧರಿಸಿದೆ. ಈ ಯೋಜನೆಯಡಿ ಸ್ಮಾರಕಗಳನ್ನು ದತ್ತು ಪಡೆದುಕೊಳ್ಳುವ ಕಂಪೆನಿಗಳಿಗೆ ‘ಸ್ಮಾರಕ ಮಿತ್ರ’ಎಂದು ಹೆಸರಿಸಲಾಗಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣೆ (ಎಎಸ್‌ಐ)ಯ ಅಧೀನದಲ್ಲಿರುವ 93 ಸ್ಮಾರಕಗಳ ಮೇಲೆ ಯೋಜನೆಯು ಗಮನವನ್ನು ಕೇಂದ್ರೀಕರಿಸಿದೆ.

ಕಂಪೆನಿಗಳು ಮತ್ತು ಸಿಎಸ್‌ಆರ್
ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್)ಯಡಿ ಕಂಪೆನಿಗಳು ಸ್ಮಾರಕಗಳನ್ನು ಪ್ರವಾಸಿ ಸ್ನೇಹಿಯನ್ನಾಗಿಸಲು ಅತ್ಯಗತ್ಯವಾದ ಮೂಲಸೌಕರ್ಯಗಳಲ್ಲಿ ಹೂಡಿಕೆಗಳನ್ನು ಮಾಡಬಹುದಾಗಿದೆ. ಇದಕ್ಕೆ ಪ್ರತಿಫಲವಾಗಿ ಅವು ಸಂಕೇತ ಫಲಕಗಳಂತಹ ಸ್ಮಾರಕಗಳ ಆಯ್ದ ಸ್ಥಳಗಳಲ್ಲಿ ತಮ್ಮ ಬ್ರಾಂಡ್ ಹೆಸರುಗಳನ್ನು ಪ್ರದರ್ಶಿಸಬಹುದಾಗಿದೆ. ಆದರೆ ಸ್ಮಾರಕಗಳನ್ನು ದತ್ತು ನೀಡುವ ಮೂಲಕ ಸರಕಾರವು ಯಾವುದೇ ಅನುಭವ ಮತ್ತು ಉತ್ತರದಾಯಿತ್ವ ಇಲ್ಲದ ಕಂಪೆನಿಗಳಿಗೆ ದೇಶದ ಇತಿಹಾಸವನ್ನೇ ಹಸ್ತಾಂತರಿಸುತ್ತಿದೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಮಹತ್ವದ ಸ್ಮಾರಕ ತಾಣಗಳು ಖಾಸಗಿ ಕಂಪೆನಿಗಳ ಕೈಸೇರುತ್ತಿರುವ ಬಗ್ಗೆ ಹಲವಾರು ಇತಿಹಾಸಕಾರರು ಆತಂಕಗೊಂಡಿದ್ದಾರೆ.

ಸಮಸ್ಯೆಗಳು
ಅಮೆರಿಕದ ಲಿಂಕನ್ ಸ್ಮಾರಕವಾಗಲಿ ಅಥವಾ ಭಾರತದ ತಾಜ್‌ಮಹಲ್ ಅಥವಾ ಕೆಂಪುಕೋಟೆಯಾಗಿರಲಿ, ಯಾವುದೇ ದೇಶದ ಬಹುಮುಖ್ಯ ಸ್ಮಾರಕಗಳನ್ನು ಕಾರ್ಪೊರೇಟ್ ಪ್ರಯೋಗಕ್ಕಾಗಿ ನೀಡಬಾರದು. ಇಂತಹ ಪ್ರಯೋಗಗಳು ಕಡಿಮೆ ಮಹತ್ವದ ಸ್ಮಾರಕಗಳೊಂದಿಗೆ ಆರಂಭಗೊಳ್ಳಬೇಕು. ಇತಿಹಾಸದಲ್ಲಿ ಯಾವುದೇ ಆಸಕ್ತಿಯಿಲ್ಲದ ಕಾರ್ಪೊರೇಟ್ ಸಂಸ್ಥೆಗಳಿಗೆ ಸ್ಮಾರಕಗಳನ್ನು ದತ್ತು ನೀಡುವುದು ಕಳವಳಕಾರಿಯಾಗಿದೆ ಎನ್ನುತ್ತಾರೆ ಸ್ಕಾಟಿಷ್ ಇತಿಹಾಸ ತಜ್ಞ ವಿಲಿಯಂ ಡೇಲ್‌ರಿಂಪಲ್.

ಹಲವಾರು ಜನರು ಈ ದತ್ತು ಯೋಜನೆಯಲ್ಲಿಯ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ. ಅದು ರಕ್ಷಣಾತ್ಮಕ ಷರತ್ತೊಂದನ್ನು ಹೊಂದಿದ್ದು,ಇದು ಸ್ಮಾರಕಕ್ಕೆ ಯಾವುದೇ ಭಾಗಕ್ಕೆ ಹಾನಿಯಾದರೆ ದತ್ತು ಪಡೆದುಕೊಂಡ ಕಂಪೆನಿಗೆ ರಕ್ಷಣೆೆ ನೀಡುತ್ತದೆ. ಅಲ್ಲದೆ ಸ್ಮಾರಕಗಳ ಸಂರಕ್ಷಣೆಯ ಹೊಣೆಯನ್ನು ಹೊತ್ತುಕೊಂಡಿರುವ ಎಎಸ್‌ಐ ಅನ್ನು ಕಂಪೆನಿಗಳು ಕಡೆಗಣಿಸಬಹುದು ಮತ್ತು ತಮ್ಮ ಉತ್ಪನ್ನಗಳ ಪ್ರಚಾರಕ್ಕಾಗಿ ಬ್ರಾಂಡ್ ಹೆಸರುಗಳನ್ನು ಸ್ಮಾರಕದ ಆಯಕಟ್ಟಿನ ಜಾಗಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಿಂಬಿಸಬಹುದು. ಸ್ಮಾರಕಗಳ ಸಂರಕ್ಷಣೆಯ ಬಗ್ಗೆಯೂ ಇತಿಹಾಸ ತಜ್ಞರು ಕಳವಳ ಗೊಂಡಿದ್ದಾರೆ. ಸ್ಮಾರಕಗಳ ಸಂರಕ್ಷಣೆ ಮತ್ತು ಪುನರುಜ್ಜೀವನದ ಬಗ್ಗೆ ದಿಲ್ಲಿಯ ಇತಿಹಾಸದ ಕುರಿತು ಹಲವಾರು ಪುಸ್ತಕಗಳನ್ನು ರಚಿಸಿರುವ ರಾಣಾ ಸಫ್ವಿ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಯನ್ನು ರೂಪಿಸುವಾಗ ಸರಕಾರವು ಆಗಾಖಾನ್ ಟ್ರಸ್ಟ್ ಮತ್ತು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ಸ್ ಆ್ಯಂಡ್ ಕಲ್ಚರ್ ಹೆರಿಟೇಜ್‌ನಂತಹ ಎನ್‌ಜಿಒಗಳ ನೆರವು ಪಡೆದುಕೊಂಡಿರಲಿಲ್ಲ. ಅಲ್ಲದೆ ವಿಷಯವು ರಾಜಕೀಕರಣಗೊಳ್ಳುವ ಅಪಾಯವೂ ಇದೆ. ಎನ್‌ಜಿಒಗಳು ಐತಿಹಾಸಿಕ ತಾಣಗಳಿಗೆ ಸಂಬಂಧಿಸಿದಂತೆ ನಿಜವಾದ ಸಂಶೋಧನೆ ಮತ್ತು ನಿಷ್ಪಕ್ಷಪಾತ ವ್ಯಾಖ್ಯಾನವನ್ನು ನಡೆಸುತ್ತವೆ. ಸ್ಮಾರಕಗಳು ಕಂಪೆನಿಗಳಿಗೆ ಹಸ್ತಾಂತರಗೊಳ್ಳುವುದರೊಂದಿಗೆ ಅವು ತಮ್ಮದೇ ಆದ ವ್ಯಾಖ್ಯಾನವನ್ನು ಹೊಂದಬಹುದು ಮತ್ತು ಈಗಾಗಲೇ ಉದ್ವಿಗ್ನ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

ಆರ್ಥಿಕ ನೆರವು ಅಗತ್ಯ
ಸ್ಮಾರಕಗಳ ಖಾಸಗೀಕರಣದ ಬದಲು ಸರಕಾರವು ಸೌಲಭ್ಯಗಳನ್ನು ಹೆಚ್ಚಿಸಲು ಸಾಕಷ್ಟು ಹಣಕಾಸನ್ನು ಒದಗಿಸಬೇಕು. ಪ್ರಸ್ತುತ ಐತಿಹಾಸಿಕ ತಾಣಗಳ ನಿರ್ವಹಣೆಗಾಗಿ ನೀಡಲಾಗುತ್ತಿರುವ ಹಣ ರಾಷ್ಟ್ರೀಯ ಬಜೆಟ್‌ನ ಕೇವಲ ಶೇ.1ರಷ್ಟಿದೆ. ಪರಂಪರಾ ತಾಣಗಳ ನಿರ್ವಹಣೆಗಾಗಿ ಸರಕಾರಿ ಸಂಸ್ಥೆಗಳನ್ನು ಪುನಃಶ್ಚೇತನಗೊಳಿಸಬೇಕು ಮತ್ತು ಸಾಕಷ್ಟು ಸಿಬ್ಬಂದಿಯನ್ನು ನೇಮಿಸಬೇಕು.

ಗೋವಾ ಸರಕಾರವು ತನ್ನ ಸ್ಮಾರಕಗಳನ್ನು ಖಾಸಗಿಯವರಿಗೆ ಒಪ್ಪಿಸುವುದರ ವಿರುದ್ಧ ಈಗಾಗಲೇ ಅಸಮಾಧಾನವನ್ನು ವ್ಯಕ್ತಪಡಿಸಿದೆ. ದಾಲ್ಮಿಯಾ ಭಾರತ್ ಸಮೂಹವು ಕೆಂಪುಕೋಟೆಯನ್ನು ದತ್ತು ಪಡೆದುಕೊಳ್ಳುವುದರಲ್ಲಿ ಗುಪ್ತ ಹಿಂದುತ್ವ ಅಜೆಂಡಾವಿರುವ ಬಗ್ಗೆ ಶುಐಬ್ ದನಿಯಾಲ್ ಅವರು ಲೇಖನವೊಂದರಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ದಾಲ್ಮಿಯಾ ಅವರು ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ಧ್ವಂಸ ವಿವಾದದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಸರಕಾರದ ನೀತಿಯು ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಬಹುದು.

ಪರಿಹಾರ
ದಿಲ್ಲಿಯಲ್ಲಿರುವ ಹುಮಾಯೂನ್ ಗೋರಿಯಂತಹ ಅತ್ಯಂತ ಪ್ರಸಿದ್ಧ ಸ್ಮಾರಕಗಳ ನಿರ್ವಹಣೆಗೆ ಯುನೆಸ್ಕೋದಂತಹ ಸಂಸ್ಥೆಗಳು ನೆರವಾಗಿವೆ ಮತ್ತು ಆರ್ಥಿಕ ನೆರವನ್ನು ಒದಗಿಸಿವೆ. ಸ್ಮಾರಕವನ್ನು ದತ್ತು ಪಡೆದುಕೊಳ್ಳುವ ಖಾಸಗಿ ಕಂಪೆನಿಯು ತನ್ನ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ಅದನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಳಸಿಕೊಳ್ಳಬಹುದು. ಅದು ಪ್ರವೇಶ ಶುಲ್ಕಗಳನ್ನೂ ಹೆಚ್ಚಿಸಬಹುದು. ಲೀಸ್‌ಗಾಗಿ ಅದು ಸ್ವಲ್ಪ ಮೊತ್ತವನ್ನು ಸರಕಾರಕ್ಕೆ ಪಾವತಿಸಬೇಕಾಗುತ್ತದೆಯಾದರೂ ಸ್ಮಾರಕಕ್ಕೆ ಭೇಟಿ ನೀಡುವ ಪ್ರವಾಸಿಗಳು ಪಾವತಿಸುವ ಶುಲ್ಕದಿಂದ ಭಾರೀ ಲಾಭವನ್ನು ಮಾಡಿಕೊಳ್ಳಬಹುದು ಎಂದು ಇತಿಹಾಸ ತಜ್ಞರು ಬೆಟ್ಟು ಮಾಡಿದ್ದಾರೆ.

ಸರಕಾರವು ತೆರಿಗೆದಾರರ ಹಣವನ್ನು ವಿವೇಚನೆಯಿಂದ ಬಳಸಬೇಕು. ಅದು ಪರಂಪರಾ ತಾಣಗಳಿಗಾಗಿ ಎನ್‌ಜಿಒಗಳು ಮತ್ತು ಸ್ವಯಂಸೇವಾ ಸಂಸ್ಥೆಗಳಿಗೆ ಅಗತ್ಯ ಹಣವನ್ನು ಒದಗಿಸಬೇಕು. ಹೀಗೆ ಮಾಡುವುದರಿಂದ ಇತಿಹಾಸ ಮತ್ತು ಸ್ಮಾರಕಗಳ ಬಗ್ಗೆ ನಿಜವಾದ ಕಳಕಳಿಗಿಂತ ತಮ್ಮ ಸ್ವಂತ ಉದ್ಧಾರದಲ್ಲೇ ಹೆಚ್ಚಿನ ಆಸಕ್ತಿ ಹೊಂದಿರುವ ಕಂಪೆನಿಗಳಿಗೆ ಹಸ್ತಾಂತರಿಸುವ ಬದಲು ಸ್ಮಾರಕಗಳ ನವೀಕರಣ ಮತ್ತು ಮೂಲಸೌಕರ್ಯಗಳನ್ನು ಉತ್ತಮಗೊಳಿಸಲು ಎನ್‌ಜಿಒಗಳಿಗೆ ಹೆಚ್ಚಿನ ಅವಕಾಶ ಒದಗಿಸಿದಂತಾಗುತ್ತದೆ.

Writer - ಎನ್.ಕೆ.

contributor

Editor - ಎನ್.ಕೆ.

contributor

Similar News