ಗರ್ಭಾವಸ್ಥೆಯಲ್ಲಿ ಶಿಶುವನ್ನು ಕಳೆದುಕೊಂಡ ಮಹಿಳೆಯರ ಬಗ್ಗೆ ಆರೋಗ್ಯ ಕೇಂದ್ರಗಳು ನಿರ್ಲಕ್ಷ ವಹಿಸಿವೆಯೇ?

Update: 2018-05-18 18:32 GMT

ಈ ತಾಯಂದಿರಲ್ಲಿ ತೀವ್ರವಾದ ತಪ್ಪಿತಸ್ಥ ಮನೋಭಾವನೆಯುಂಟಾಗಿದೆ. ತಾಯಂದಿರಾಗಿ ನಾವು ವಿಫಲರಾಗಿದ್ದೇವೆಂಬ ಭಾವನೆ ಅವರನ್ನು ಕಾಡುತ್ತಿದೆ. ಗಾಯದ ಮೇಲೆ ಬರೆಎಳೆದಂತೆ ಸ್ಥಳೀಯ ಆರೋಗ್ಯಪಾಲನಾ ಸಿಬ್ಬಂದಿಯ ಒರಟಾದ ವರ್ತನೆ, ಈ ನತದೃಷ್ಟ ಮಹಿಳೆಯರನ್ನು ಹೈರಾಣಾಗಿಸಿದೆ.


ವಿಜಯ ಪ್ರಸಾದ್ ಗೋಪಿಚಂದ್ರನ್
 ಸುದರ್ಶಿನಿ ಸುಬ್ರಹ್ಮಣ್ಯಂ ಮತ್ತು
 ಮಾರಿಯಾ ಜುಸ್ಲೆರ್ ಕಾಲ್‌ಸಿಂಗ್


ಗರ್ಭಾವಸ್ಥೆಯಲ್ಲಿ ಶಿಶುವಿನ ಮರಣವು ಭಾರತ ಸೇರಿದಂತೆ ಕೆಳ ಹಾಗೂ ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಮಕ್ಕಳ ಆರೋಗ್ಯಪಾಲನೆ ಕುರಿತ ಅತ್ಯಂತ ನಿರ್ಲಕ್ಷಿತ ಸಮಸ್ಯೆಗಳಲ್ಲೊಂದಾಗಿದೆ. ಆರೋಗ್ಯಪಾಲನೆ ವಿಷಯದಲ್ಲಿ ಉತ್ತಮ ನಿರ್ವಹಣೆ ತೋರಿರುವ ರಾಜ್ಯಗಳು ಕೂಡಾ ಭ್ರೂಣದಲ್ಲಿ ಶಿಶು ಮರಣಕ್ಕೊಳಗಾದ ಮಹಿಳೆಯರಿಗೆ ಅಲ್ಪಸ್ವಲ್ಪ ನೆರವನ್ನು ಮಾತ್ರವೇ ನೀಡಿರುವುದಾಗಿ ತಮಿಳುನಾಡಿನಲ್ಲಿ ನಡೆಸಲಾದ ಅಧ್ಯಯನವೊಂದು ತೋರಿಸಿಕೊಟ್ಟಿದೆ. ಆರೋಗ್ಯಪಾಲನೆ ಸೌಲಭ್ಯಗಳು ಹಾಗೂ ಉದ್ಯೋಗಿಗಳ ಹೆಚ್ಚಿನ ಕೆಲಸದ ಹೊರೆಯು, ಗರ್ಭದಲ್ಲಿ ಶಿಶುಮರಣದ ಆಘಾತ ಎದುರಿಸಿದ ಮಹಿಳೆಯರಿಗೆ ಸಂವೇದನೆಯೊಂದಿಗೆ ಶುಶ್ರೂಷೆ ನೀಡದಿರುವುದು ಹಾಗೂ ಅವರ ಮಾನಸಿಕ ಚೇತರಿಕೆಯನ್ನು ಕಡೆಗಣಿಸಲಾಗುತ್ತಿದೆಯೆಂದು ಅಧ್ಯಯನ ವರದಿಯು ತಿಳಿಸಿದೆ.

 ಗರ್ಭಧಾರಣೆಯಾದ 28 ವಾರಗಳಲ್ಲಿ ಅಥವಾ ಆ ಬಳಿಕ ಬದುಕಿರುವ ಲಕ್ಷಣಗಳನ್ನು ತೋರಿಸದೆ ಜನಿಸಿದ ಮಗುವನ್ನು ಗರ್ಭಾವಸ್ಥೆಯ ಶಿಶುಮರಣ(ಠಿಜ್ಝ್ಝಿಚಿಜ್ಟಿಠಿ) ಎಂದು ವ್ಯಾಖ್ಯಾನಿಸಲಾಗುತ್ತದೆ. ಜಗತ್ತಿನಾದ್ಯಂತ ಪ್ರತಿವರ್ಷವೂ ಅಂದಾಜು 20.60 ಲಕ್ಷ ಗರ್ಭಾವಸ್ಥೆಯಲ್ಲಿ ಶಿಶುಮರಣ ಸಂಭವಿಸುತ್ತದೆ ಹಾಗೂ ಅವರಲ್ಲಿ ಸುಮಾರು 98 ಶೇಕಡಾ ಮಂದಿ ಕಡಿಮೆ ಹಾಗೂ ಮಧ್ಯಮ ಆದಾಯವರ್ಗದ ದೇಶಗಳಿಗೆ ಸೇರಿದವರಾಗಿದ್ದಾರೆ. ನವಜಾತಶಿಶು ಮರಣದ ಆಘಾತದಿಂದ ಯಾತನೆಗೀಡಾದ ಮಹಿಳೆಯರು ಹಾಗೂ ಅವರ ಕುಟುಂಬಗಳು ವಿಷಾದ, ತಪ್ಪಿತಸ್ಥ ಮನೋಭಾವ, ಗೊಂದಲ, ಆಘಾತ, ಸಾಮಾಜಿಕ ಕಳಂಕ ಹಾಗೂ ತಾರತಮ್ಯ ಸೇರಿದಂತೆ ಹಲವಾರು ರೀತಿಯ ಮಾನಸಿಕ ತುಮುಲದಿಂದ ನರಳುತ್ತವೆ. ಶೋಕತಪ್ತ ತಾಯಿ ಹಾಗೂ ಆಕೆಯ ಕುಟುಂಬದ ವೇದನೆಯನ್ನು ಅಸಂವೇದನಾಯುತವಾದ ಆರೋಗ್ಯ ವ್ಯವಸ್ಥೆಗಳು ಹಾಗೂ ಆರೋಗ್ಯಪಾಲನೆ ಸೌಲಭ್ಯಗಳನ್ನು ಒದಗಿಸುವವರು ಇನ್ನಷ್ಟು ಉಲ್ಬಣಗೊಳಿಸುತ್ತಾರೆ.

 ತಮಿಳುನಾಡಿನಲ್ಲಿ ಶಿಶುಮರಣದ ಪ್ರಮಾಣ ದರ (ಮೊದಲ ಹುಟ್ಟುಹಬ್ಬ ಆಚರಣೆಗೆ ಮುನ್ನ ಸಾವನ್ನಪ್ಪುವ ಶಿಶುಗಳು) ಅತ್ಯಂತ ಕಡಿಮೆಯಿದ್ದು ಅಲ್ಲಿ ಜನಿಸುವ ಪ್ರತಿ 1 ಸಾವಿರ ಶಿಶುಗಳ ಪೈಕಿ 20 ಸಾವಿಗೀಡಾಗುತ್ತವೆ. ಆದರೆ ಆ ರಾಜ್ಯದಲ್ಲಿ ಜನನಕಾಲದಲ್ಲಿ ಸಾವಿಗೀಡಾಗುವ ಶಿಶುಗಳ ಸಂಖ್ಯೆಯು ಪ್ರತಿ 1 ಸಾವಿರ ಶಿಶುಗಳಿಗೆ 6.8 ಆಗಿದೆ. ಗರ್ಭಾವಸ್ಥೆಯಲ್ಲಿ ಸಾವನ್ನಪ್ಪುವ ಶಿಶುಗಳ ಸಂಖ್ಯೆಯು ಪ್ರತಿ 1 ಸಾವಿರ ಜನನಗಳಿಗೆ 20 ಆಗಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕವೆನ್ನಲಾಗಿದೆ.

ದೊಡ್ಡ ಸಂಖ್ಯೆಯ ಶಿಶುಗಳು ಗರ್ಭಾವಸ್ಥೆಯಲ್ಲಿ ಸಾವಿಗೀಡಾಗುತ್ತಿರುವುದಕ್ಕೆ ನಿಖರವಾದ ಕಾರಣ ಸ್ಪಷ್ಟವಾಗಿ ತಿಳಿದುಬರುತ್ತಿಲ್ಲ. ಶೇ.49ರಷ್ಟು ಪ್ರಕರಣಗಳಲ್ಲಿ, ಮಧುಮೇಹ, ಅಧಿಕ ರಕ್ತದೊತ್ತಡದಂತಹ ತಾಯಿಗೆ ಸಂಬಂಧಿಸಿದ ರೋಗಗಳು, ಪ್ರಸವಕ್ಕೆ ಮೊದಲೇ ಮಾಸುಚೀಲ (ಪ್ಲಸೆಂಟಾ)ದಿಂದ ಶಿಶು ಪ್ರತ್ಯೇಕಗೊಳ್ಳುವುದು, ಭ್ರೂಣದ ವಿರೂಪ, ಅನಿಮಿಯಾ ಸೇರಿದಂತೆ ತಾಯಿಯ ಅಪೌಷ್ಟಿಕತೆ, ಗರ್ಭಧಾರಣೆಯ ಸಂದರ್ಭದಲ್ಲಿ ಮಲೇರಿಯಾದಂತಹ ಸೋಂಕುರೋಗಗಳು ಮತ್ತು ಹೊಕ್ಕುಳಬಳ್ಳಿಯಂತಹ ಅವಘಡಗಳು, ಗರ್ಭಾವಸ್ಥೆಯಲ್ಲಿ ಶಿಶುಗಳ ಸಾವಿಗೆ ಮುಖ್ಯ ಕಾರಣಗಳಾಗಿವೆ.

2016ರ ಜನವರಿ ಹಾಗೂ 2017ರ ಜನವರಿ ಮಧ್ಯೆ ಗರ್ಭಾವಸ್ಥೆಯಲ್ಲೇ ಶಿಶು ಮರಣದ ಆಘಾತವನ್ನು ಅನುಭವಿಸಿದ ಚೆನ್ನೈ ನಗರ ಹಾಗೂ ಆಸುಪಾಸಿನ ಎಂಟು ನಗರಗಳ ಎಂಟು ಮಹಿಳೆಯರನ್ನು ನಾವು ಸಂದರ್ಶಿಸಿದ್ದೆವು. ಶಿಶುಮರಣದ ಬಳಿಕ ಅವರು ಎದುರಿಸಿದ ಸಾಮಾಜಿಕ, ಭಾವನಾತ್ಮಕ ಹಾಗೂ ಮಾನಸಿಕ ಸಮಸ್ಯೆಗಳ ಬಗ್ಗೆ ಅಳವಾದ ಅಧ್ಯಯನ ನಡೆಸಿದೆವು. ಇದರ ಜೊತೆಗೆ ಗ್ರಾಮ ಆರೋಗ್ಯ ಕಾರ್ಯಕರ್ತರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಸಿಬ್ಬಂದಿಯನ್ನು ಕೂಡಾ ನಾವು ಸಂದರ್ಶಿಸಿದ್ದೇವೆ.

ಗರ್ಭಾವಸ್ಥೆಯಲ್ಲಿ ಶಿಶುವನ್ನು ಕಳೆದುಕೊಂಡ ತಮ್ಮ ಶೋಕ, ಮಾನಸಿಕ ಯಾತನೆಗಳ ಬಗ್ಗೆ ಆರೋಗ್ಯ ಕೇಂದ್ರದ ಸಿಬ್ಬಂದಿ ಅಸಂವೇದನಾಯುತವಾಗಿ ನಡೆದುಕೊಂಡಿದ್ದರು, ತಮಗಾದ ನೋವಿಗೆ ಸ್ಪಂದಿಸಲು ಅವರು ಆಸಕ್ತಿ ವಹಿಸಿರಲಿಲ್ಲ ಮತ್ತು ಅನುಕಂಪರಹಿತವಾಗಿ ವರ್ತಿಸಿದರೆಂದು ಈ ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದರು.

ಈ ತಾಯಂದಿರು ಹಾಗೂ ಅವರ ಕುಟುಂಬಿಕರು ಕೂಡಾ ಗರ್ಭಾವಸ್ಥೆಯಲ್ಲಿ ಮಗುವು ಸಾವನ್ನಪ್ಪುವುದನ್ನು ನಿರೀಕ್ಷಿಸಿರಲಿಲ್ಲ. ಏನು ಸಂಭವಿಸಿತೆಂಬುದನ್ನು ತಿಳಿದುಕೊಳ್ಳಲು ಅವರು ಹತಾಶೆಯ ಪ್ರಯತ್ನ ನಡೆಸುತ್ತಿದ್ದರು. ತಾಯಂದಿರು ಹಾಗೂ ಅವರ ಕುಟುಂಬಗಳು ತಿರಸ್ಕಾರ, ಆಕ್ರೋಶ, ಚೌಕಾಶಿ, ಖಿನ್ನತೆ ಹಾಗೂ ವಾಸ್ತವಿಕತೆಯ ಅಂಗೀಕಾರ ಹೀಗೆ ವಿಷಾದದ ಐದು ಹಂತಗಳನ್ನು ಹಾದುಹೋಗಿದ್ದಾರೆ. ಈ ತಾಯಂದಿರಲ್ಲಿ ತೀವ್ರವಾದ ತಪ್ಪಿತಸ್ಥ ಮನೋಭಾವನೆಯುಂಟಾಗಿದೆ. ತಾಯಂದಿರಾಗಿ ನಾವು ವಿಫಲರಾಗಿದ್ದೇವೆಂಬ ಭಾವನೆ ಅವರನ್ನು ಕಾಡುತ್ತಿದೆ. ಗಾಯದ ಮೇಲೆ ಬರೆಎಳೆದಂತೆ ಸ್ಥಳೀಯ ಆರೋಗ್ಯಪಾಲನಾ ಸಿಬ್ಬಂದಿಯ ಒರಟಾದ ವರ್ತನೆ, ಈ ನತದೃಷ್ಟ ಮಹಿಳೆಯರನ್ನು ಹೈರಾಣಾಗಿಸಿದೆ.

ಗರ್ಭಾವಸ್ಥೆಯಲ್ಲೇ ಶಿಶು ಮರಣದ ಯಾತನೆ ಅನುಭವಿಸಿದ ಮಹಿಳೆಯರನ್ನು ಒಂದೋ ಆಸ್ಪತ್ರೆಯ ಪ್ರಸವನಂತರದ ವಾರ್ಡ್‌ಗೆ ಇಲ್ಲವೇ ಪ್ರಸವಪೂರ್ವ ವಾರ್ಡ್‌ಗೆ ದಾಖಲಿಸಲಾಗುತ್ತಿದೆ. ಈ ಎರಡೂ ಸ್ಥಳಗಳು ಸಾಮಾನ್ಯ ಮಗು ಜನಿಸುವ ಇಲ್ಲವೇ ಕಂದಮ್ಮನ ಆಗಮನವನ್ನು ನಿರೀಕ್ಷಿಸುವ ತಾಯಂದಿರಿರುವ ಸ್ಥಳಗಳಾಗಿವೆ. ಆದರೆ ಗರ್ಭದಲ್ಲೇ ಮಗುವನ್ನು ಕಳೆದುಕೊಂಡ ಮಹಿಳೆಯರಿಗೆ ಈ ಸ್ಥಳಳು ತೀವ್ರವಾದ ಖಿನ್ನತೆಯ ಹಾಗೂ ತಾನು ಹೊರಗಿನವಳೆಂಬ ಭಾವನೆಯನ್ನು ಮೂಡಿಸುತ್ತವೆ. ಸರಕಾರಿ ಆಸ್ಪತ್ರೆಗಳಲ್ಲಿ ಮಿತಿಮೀರಿ ಜನರು ತುಂಬಿರುವುದು ಹಾಗೂ ಕಡಿಮೆ ಆಸ್ಪತ್ರೆಗಳ ಲಭ್ಯತೆಯಿರುವುದು, ಗರ್ಭಾವಸ್ಥೆಯಲ್ಲಿ ಮಕ್ಕಳನ್ನು ಕಳೆದುಕೊಂಡ ಮಹಿಳೆಯರನ್ನು ಪ್ರಸವಪೂರ್ವ ಅಥವಾ ಪ್ರಸವಾನಂತರ ವಾರ್ಡ್‌ನಲ್ಲಿ ಇರಿಸಲು ಪ್ರಮುಖ ಕಾರಣಗಳಾಗಿವೆ. ಇದಕ್ಕೂ ಹೆಚ್ಚಾಗಿ, ಆಕೆ ಮುಖ್ಯವಾರ್ಡ್‌ನಲ್ಲಿದ್ದರೆ ಆರೋಗ್ಯ ಸಿಬ್ಬಂದಿಗೆ ಆಕೆಯ ಶುಶ್ರೂಷೆ ಮಾಡಲು ಸುಲಭವಾಗುತ್ತದೆ. ಆದಾಗ್ಯೂ, ಹೀಗೆ ಮಾಡುವುದರಿಂದ ಆಕೆಯ ಯಾತನೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ.

ಮಗು ಮೃತಪಟ್ಟಿದೆಯೆಂದು ಪ್ರಸವದ ತಕ್ಷಣವೇ ತಾಯಿಗೆ ತಿಳಿಸಿದಲ್ಲಿ ಆ ಆಘಾತವನ್ನು ಸಹಿಸಿಕೊಳ್ಳಲು ಆಕೆಗೆ ಸಾಧ್ಯವಾಗದೆಂದು ಭಾವಿಸಿ ಅನೇಕ ಮಂದಿ ಆರೋಗ್ಯ ಸೇವಾದಾರರು ಆ ವಿಷಯವನ್ನು ಆಕೆಗೆ ಹೇಳುವುದಿಲ್ಲ. ಮೃತ ಶಿಶುವಿನ ದೇಹವನ್ನು ಮಹಿಳೆಗೆ ತೋರಿಸಕೂಡದೆಂಬುದಾಗಿಯೂ ಅವರು ಭಾವಿಸುತ್ತಾರೆ. ನವಜಾತ ಶಿಶುವಿನ ಸಾವಿನ ಶೋಕಾಚರಣೆಗೆ ಸಂಬಂಧಿಸಿ ಹಲವಾರು ಪರಂಪರಾಗತ ಆಚರಣೆಗಳಿರುತ್ತವೆ. ಕೆಲವು ಸಂಸ್ಕೃತಿಗಳಲ್ಲಿ ಮಗುವಿನ ಮೃತದೇಹಕ್ಕೆ ಸಾಮಾನ್ಯವಾದ ಅಂತಿಮ ಕ್ರಿಯಾವಿಧಿಗಳನ್ನು ನಡೆಸಲಾಗುವುದಿಲ್ಲ ಹಾಗೂ ಅದನ್ನು ಒಂದು ವ್ಯಕ್ತಿಯಾಗಿ ಪರಿಗಣಿಸಲಾಗುವುದಿಲ್ಲ.

ಕೆಲವು ಮಹಿಳೆಯರು ಮಗುವನ್ನು ಕಳೆದುಕೊಂಡ ನೋವಿನಿಂದ ಹೊರಬರಲು ತಮ್ಮ ಕೆಲಸಗಳಲ್ಲಿ ಗಾಢವಾಗಿ ಮುಳುಗತೊಡಗುತ್ತಾರೆ. ಇದರಿಂದಾಗಿ ಅವರು ತಮ್ಮ ಕುಟುಂಬ ಹಾಗೂ ಆತ್ಮೀಯರಿಂದ ದೂರವಾಗತೊಡಗುತ್ತಾರೆ ಮತ್ತು ತಮ್ಮ ಕುಟುಂಬದ ಮಕ್ಕಳ ಮೇಲೆ ತಾಯಿ ಮಮತೆಯನ್ನು ಪ್ರದರ್ಶಿಸುತ್ತಾರೆ ಮತ್ತು ಮೊದಲಿಗಿಂತ ಹೆಚ್ಚು ಧಾರ್ಮಿಕತೆಯತ್ತ ಒಲವು ತೋರಿಸಲಾರಂಭಿಸುತ್ತಾರೆ.

ಆರೋಗ್ಯಪಾಲಕರಿಗೆ ಮಿತಿಮೀರಿದ ಕೆಲಸದ ಹೊರೆ
ಗರ್ಭಿಣಿಯರು ಹಾಗೂಮಕ್ಕಳಿಗೆ ಸಾಮಾನ್ಯವಾಗಿ ಆರೋಗ್ಯಪಾಲನೆ ಸೇವೆಯನ್ನು ಒದಗಿಸುವ ಆರೋಗ್ಯ ಕಾರ್ಯಕರ್ತರು, ತಮ್ಮನ್ನು ಅತಿಯಾಗಿ ದುಡಿಸಿಕೊಳ್ಳಲಾಗುತ್ತಿದೆ ಹಾಗೂ ಅನೇಕ ಆರೋಗ್ಯ ಸೇವಾ ಕಾರ್ಯಕ್ರಮಗಳ ಹೊರೆಯನ್ನು ತಮ್ಮ ಮೇಲೆ ಹೊರಿಸಲಾಗುತ್ತದೆ. ಇದರಿಂದಾಗಿ ಎಲ್ಲಾ ತಾಯಂದಿರಿಗೆ ಅವರ ಪ್ರಸವಾನಂತರದ ಆರೈಕೆ ಮಾಡಲಾಗುತ್ತಿಲ್ಲವೆಂದು ಅವರು ದೂರುತ್ತಾರೆ. ವಲಸಿಗ ಮಹಿಳೆಯರು ಹಾಗೂ ನಗರಪ್ರದೇಶದ ಕೊಳೆಗೇರಿಗಳಲ್ಲಿರುವ ಕೆಲವು ಮಹಿಳೆಯರು ಪ್ರಸವಾನಂತರದ ಸುರಕ್ಷಿತ ಪಾಲನೆಯ ಸವಲತ್ತಿನಿಂದ ಹೊರಗುಳಿಯಲ್ಪಡುತ್ತಾರೆ. ಇಂತಹ ಮಹಿಳೆಯರೇ ಗರ್ಭಧಾರಣೆಯ ಸಂದರ್ಭದಲ್ಲಿ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ವರದಿ ಹೇಳಿದೆ.

ನವಜಾತ ಶಿಶುವಿನ ಮರಣಕ್ಕಾಗಿ ತಾವು ಹಲವಾರು ಸಂದರ್ಭಗಳಲ್ಲಿ ಕುಟುಂಬಿಕರು ತಮ್ಮ ಮೇಲೆಯೇ ದೂರು ಹೊರಿಸುತ್ತಾರೆ ಹಾಗೂ ಮೇಲಧಿಕಾರಿಗಳು ಕೂಡಾ ಆ ಸಾವಿಗೆ ತಮ್ಮನ್ನೇ ಹೊಣೆಗಾರರನ್ನಾಗಿಸುತ್ತಾರೆ ಎಂದು ಆರೋಗ್ಯ ಕಾರ್ಯಕರ್ತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ದೇಶಾದ್ಯಂತ ಆರೋಗ್ಯ ಕಾರ್ಯಕರ್ತರ ಕೊರತೆಯನ್ನು ತಕ್ಷಣವೇ ನೀಗಿಸಬೇಕಾದ ಅಗತ್ಯವಿದೆಯೆಂದವರು ಪ್ರತಿಪಾದಿಸುತ್ತಾರೆ.

ಈ ಸಮಸ್ಯೆಗೆ ಪರಿಹಾರವೇನು?
ಗರ್ಭಾವಸ್ಥೆಯಲ್ಲಿ ಶಿಶುವಿನ ಸಾವಿನ ಪ್ರಕರಣಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ವೈದ್ಯರು, ನರ್ಸ್‌ಗಳು, ದಾದಿಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಗರ್ಭಾವಸ್ಥೆಯಲ್ಲಿನ ಮಗುವನ್ನು ಕಳೆದುಕೊಂಡ ತಾಯಿಯ ಸಾಮಾಜಿಕ, ಮಾನಸಿಕ ಹಾಗೂ ಭಾವಾನಾತ್ಮಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ನವಜಾತ ಶಿಶುವನ್ನು ಕಳೆದುಕೊಂಡ ತಾಯಂದಿರಿಗೆ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಅಥವಾ ಕೊಠಡಿಯನ್ನು ಒದಗಿಸಬೇಕಾಗಿದೆ.

ಶಿಶುವನ್ನು ಕಳೆದುಕೊಂಡ ತಾಯಿಯ ಹಾಗೂ ಕುಟುಂಬದ ನೋವನ್ನು ನಿಭಾಯಿಸಲು ಪ್ರತಿಯೊಂದು ಮಾತೃ ಹಾಗೂ ಮಗು ಆರೋಗ್ಯ ಘಟಕವು ಮನಃಶಾಸ್ತ್ರಜ್ಞರ ಸೇವೆಯನ್ನು ಬಳಸಿಕೊಳ್ಳಬೇಕಾಗಿದೆ. ಪ್ರಾರ್ಥನೆ ಮತ್ತಿತರ ಧಾರ್ಮಿಕ ಆಚರಣೆಗಳು ಅವರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕಾಗಿದೆ.

ಗರ್ಭಾವಸ್ಥೆಯಲ್ಲಿ ಶಿಶುಮರಣವನ್ನಪ್ಪಿರುವುದನ್ನು ಮುಂಚಿತವಾಗಿಯೇ ಪತ್ತೆಹಚ್ಚುವ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸಬೇಕಾಗಿದೆ. ಗರ್ಭಾವಸ್ಥೆಯಲ್ಲಿನ ಶಿಶುಗಳ ಸಾವಿನ ಬಗ್ಗೆ ಪಾಲಕರು ಹಾಗೂ ಅವರ ಕುಟುಂಬದ ಜೊತೆ ಪರಿಣಾಮಕಾರಿಯಾಗಿ ಸಂವಹನ ನಡೆಸುವುದಕ್ಕಾಗಿ ಎಲ್ಲಾ ಆರೋಗ್ಯಪಾಲನಾ ಸೇವಾದಾರರಿಗೆ ತರಬೇತಿ ನೀಡಬೇಕಾಗಿದೆ. ಪ್ರಸವಕಾಲದ ಸಾವು, ಅದಕ್ಕೆ ಕಾರಣಗಳು,ಅದನ್ನು ತಡೆಗಟ್ಟುವಿಕೆ ಹಾಗೂ ಅದರ ಪರಿಣಾಮಗಳ ಬಗ್ಗೆ ಸಾಮೂಹಿಕ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ನಡೆಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News