ಗೋಹತ್ಯೆ ಶಂಕೆ: ತಂಡದಿಂದ ಯುವಕನ ಹತ್ಯೆ

Update: 2018-05-20 05:30 GMT

ಭೋಪಾಲ್, ಮೇ 20: ಟೈಲರ್ ಒಬ್ಬರು ಗೋಹತ್ಯೆ ಮಾಡುತ್ತಿದ್ದಾರೆ ಎಂಬ ಶಂಕೆಯಿಂದ ಗುಂಪೊಂದು ಆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಆ ವ್ಯಕ್ತಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ದರ್ಜಿಯಾಗಿ ಕೆಲಸ ಮಾಡುತ್ತಿದ ರಿಯಾಝ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ರಿಯಾಝ್  ಹಾಗೂ ಶಕೀಲ್ ಅವರ ಮೇಲೆ ಗುಂಪು ಹಲ್ಲೆ ಮಾಡಿತ್ತು. ತೀವ್ರ ಗಾಯಗೊಂಡ ಇಬ್ಬರನ್ನೂ ಜಬಲ್ಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಮುಂಜಾನೆ ಮೈಹಾರ್ ಪಟ್ಟಣ ಬಳಿಯ ಅಮ್ಗಾರಾ ಎಂಬ ಗ್ರಾಮದ ಪುರಾನಿ ಬಸ್ತಿ ಬಳಿ ದೊಣ್ಣೆ ಹಾಗೂ ಇತರ ಆಯುಧಗಳಿಂದ ಹಲ್ಲೆ ಮಾಡಲಾಗಿತ್ತು.

ಘಟನೆ ಹಿನ್ನೆಲೆಯಲ್ಲಿ ಸಾತ್ನಾ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದಾರೆ. ರವಿವಾರ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಸಾತ್ನಾಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ತೀವ್ರ ಹಲ್ಲೆಗೊಳಗಾದ ರಿಯಾಝ್ ಸಾತ್ನಾ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲವೇ ಗಂಟೆಗಳಲ್ಲಿ ಮೃತಪಟ್ಟರು. ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ.

ಶಕೀಲ್ ಟ್ಯಾಕ್ಸಿ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಶುಕ್ರವಾರ ಮುಂಜಾನೆ 3 ಗಂಟೆ ವೇಳೆಗೆ ಗುಂಪು ಹಲ್ಲೆ ಮಾಡಿದ್ದಾಗಿ ಶಕೀಲ್ ನೀಡಿದ ದೂರಿನಲ್ಲಿ ಹೇಳಿದ್ದಾರೆ. ಗೋಹತ್ಯೆಯಲ್ಲಿ ತಾವು ನಿರತರಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಘಟನೆ ಸಂಬಂಧ ಅಮ್ಗಾರಾ ಗ್ರಾಮದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಪವನ್ ಸಿಂಗ್ ಗೊಂಡ್, ವಿಜಯ್ ಸಿಂಗ್ ಗೊಂಡ್, ಫೂಲ್ ಸಿಂಗ್ ಗೊಂಡ್ ಹಾಗೂ ನಾರಾಯಣ್ ಸಿಂಗ್ ಗೊಂಡ್ ಎಂದು ಗುರುತಿಸಲಾಗಿದೆ.

ರಿಯಾಝ್ ಹಾಗೂ ಶಕೀಲ್ ಗ್ರಾಮದಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದರು ಎಂದು ಪವನ್ ಸಿಂಗ್ ಗೊಂಡ್ ಪ್ರತಿ ದೂರು ನೀಡಿದ್ದಾರೆ. ಯಾರೂ ಅವರಿಗೆ ಹೊಡೆದಿಲ್ಲ. ತಪ್ಪಿಸಿಕೊಳ್ಳುವ ಸಲುವಾಗಿ ಓಡಿ ಹೋಗುತ್ತಿದ್ದ ಅವರು ಬಿದ್ದು ಗಾಯಗೊಂಡಿದ್ದಾರೆ ಎನ್ನುವುದು ಆತನ ವಾದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News