ಯುವಕರು ಸ್ವಯಂ ಉದ್ಯೋಗಕ್ಕೆ ಮುಂದಾಗಲಿ: ಕೇಂದ್ರ ವಿ.ವಿ ಕುಲಪತಿ ಎಸ್.ಜಾಫೆಟ್
ಬೆಂಗಳೂರು, ಮೇ 20: ವಿಶ್ವ ಆರ್ಥಿಕ ವ್ಯವಸ್ಥೆಯಲ್ಲಿ ಮೂರನೆ ಸ್ಥಾನ ಹೊಂದಿರುವ ಭಾರತ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದ್ದು, ಶೇ.90ಜನರು ಕೇವಲ ಮಾಸಿಕ 15ಸಾವಿರ ರೂ. ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಹೊಸಬರಿಗೆ ಕೆಲಸವೇ ಸಿಗದಂತಾಗಿದೆ. ಹೀಗಾಗಿ ಯುವಕರು ಸ್ವಯಂ ಉದ್ಯೋಗಿಗಳಾಗುವ ಬಗ್ಗೆ ಪ್ರಯತ್ನಿಸಬೇಕೆಂದು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಎಸ್.ಜಾಫೆಟ್ ತಿಳಿಸಿದರು.
ಬನ್ನೇರುಘಟ್ಟ ರಸ್ತೆಯಲ್ಲಿರುವ ಕ್ರೈಸ್ತ ವಿಶ್ವವಿದ್ಯಾಲಯ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಲೇ ಇದೆ. ದೇಶದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದೆಯೆ ವಿನಃ ಕಡಿಮೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಇವೆಲ್ಲವನ್ನು ಮನಗೊಂಡು ಯುವಕರು ವೃತ್ತಿ ಬದುಕಿನಲ್ಲಿ ಹೊಸ ಅವಿಷ್ಕಾರಗಳಿಗೆ ಮುಂದಾಗಬೇಕು ಎಂದು ತಿಳಿಸಿದರು.
ಪದವಿ ಪಡೆದ ವಿದ್ಯಾರ್ಥಿಗಳು ಉತ್ತಮ ವೃತ್ತಿ ಆಯ್ಕೆ ಮಾಡಿಕೊಂಡ ನಂತರ ಸಮಾಜಕ್ಕೆ ಕೊಡುಗೆ ನೀಡುವ ಬಗ್ಗೆಯು ಆಲೋಚಿಸಬೇಕು. ಸಮಾಜದಿಂದ ನಾವು ಸಾಕಷ್ಟು ಪಡೆದುಕೊಂಡಿದ್ದೇವೆ. ಇದನ್ನು ಮರಳಿ ಸಮಾಜಕ್ಕೆ ನೀಡುವ ಉದ್ದೇಶ ಮತ್ತು ಬದ್ಧತೆ ಎಲ್ಲರಲ್ಲೂ ಇರಬೇಕು ಎಂದು ಅವರು ಆಶಿಸಿದರು.
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಶೀಘ್ರದಲ್ಲೆ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಲಿದೆ. ಹಲವಾರು ಪ್ರಚಲಿತ ಕೋರ್ಸ್‌ಗಳನ್ನು ಪರಚಯಿಸುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.