ಕೋಮುವಾದ, ಜಾತಿವಾದ ಚುನಾವಣೆಗಳನ್ನು ನಿಯಂತ್ರಿಸುತ್ತಿದೆ: ಡಾ.ಕೆ.ಮರುಳಸಿದ್ದಪ್ಪ

Update: 2018-05-20 13:57 GMT

ಬೆಂಗಳೂರು, ಮೇ 20: ಕೋಮುವಾದ, ಜಾತಿವಾದ, ಕಪ್ಪುಹಣ ಚುನಾವಣೆ ನಿಯಂತ್ರಿಸುವ ಕಾಲದಲ್ಲಿದ್ದೇವೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ಗಾಂಧಿ ಭವನದಲ್ಲಿ ಕ್ರಿಯಾ-ನವಕರ್ನಾಟಕ ಜಂಟಿ ಯೋಜನೆಯಡಿ ಹೊರತಂದಿರುವ ಮಾರ್ಕ್ಸ್ 200-ಕ್ಯಾಪಿಟಲ್-150 ಮಾಲಿಕೆಯ ಮೊದಲ ಕಂತಿನ ಪುಸ್ತಕಗಳ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಹಸನ ನೋಡಿದರೆ ಪ್ರಜಾಪ್ರಭುತ್ವ ಅಂತಿಮ ಹಂತಕ್ಕೆ ಬಂದಿದೆಯೇ ಎನ್ನುವ ಪ್ರಶ್ನೆ ಮೂಡುತ್ತಿದೆ ಎಂದು ತಿಳಿಸಿದರು.

ಇಂದಿನ ಪ್ರಜಾಪ್ರಭುತ್ವ ತೀರಾ ಹದಗೆಟ್ಟಿದೆ. ಸಮಕಾಲೀನ ಭಾರತದಲ್ಲಿ ಪ್ರಜಾಪ್ರಭುತ್ವವು ಅವನತಿ ಕಾಣುತ್ತಿರುವುದು ಕಳೆದ ವಾರದಿಂದ ಎಲ್ಲರೂ ನೋಡುತ್ತಿದ್ದಾರೆ. ಇಂತಹ ಅತಂತ್ರ ಸ್ಥಿತಿಯಲ್ಲಿ ಜನ ಇರಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಯಾರು ಸರಿ, ಯಾರು ತಪ್ಪು, ಸೂತ್ರಧಾರ ಯಾರು?, ನಾಯಕ ಯಾರು, ಖಳನಾಯಕ ಯಾರು, ಎಲ್ಲವೂ ಅಯೋಮಯವಾಗಿರುವ ಕಾಲವಿದು. ಇಂತಹ ವಿರೋಧಾಭಾಸ ಯುಗದಲ್ಲಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಇಂದು ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ. ಪ್ರಸ್ತುತ ಪ್ರಜಾಪ್ರಭುತ್ವ ಹಾಗೂ ಮಾರ್ಕ್ಸ್‌ವಾದ ಎರಡೂ ಒಗ್ಗೂಡಿ ಭವಿಷ್ಯವನ್ನು ರೂಪಿಸಬೇಕಾದಂತಹ ಪರಿಸ್ಥಿತಿಯಿದೆ. ಮಾರ್ಕ್ಸ್‌ವಾದವನ್ನು ಯುವಜನತೆಗೆ, ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಅದರ ಬಗ್ಗೆ ತಿಳಿದು ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.

ಸಂವಿಧಾನ ಅತ್ಯಂತ ಶ್ರೇಷ್ಠವಾಗಿದೆ. ಆದರೆ ಇದನ್ನು ಅನುಷ್ಠಾನಗೊಳಿಸುವವರು ಸಮರ್ಪಕವಾಗಿರದೇ ಇದ್ದರೆ ಎಂದು ಸ್ವತಃ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಶ್ನಿಸಿದ್ದರು. ಹಲವು ದಶಕಗಳ ಹಿಂದೆಯೇ ಇಂತಹ ಮುಂದಾಲೋಚನೆಯಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಇಂದು ಕರ್ನಾಟಕದ ವಿದ್ಯಮಾನಗಳಿವೆ. ಬಿಜೆಪಿ ಅಪಾಯಕಾರಿ. ಹಾಗೆಂದ ಮಾತ್ರಕ್ಕೆ ಉಳಿದವರೆಲ್ಲರೂ ಸಾಚಾ ಎಂದು ತಿಳಿದುಕೊಳ್ಳುವಂತಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಗ್ರಂಥಾಲಯದಲ್ಲಿ ಕೃತಿ ಲಭ್ಯವಾಗಲಿ: ಕಾರ್ಲ್‌ಮಾರ್ಕ್ಸ್ ಸಮಗ್ರ ಬರಹಗಳ ಕೃತಿ ಸಾರ್ವಜನಿಕ ಮತ್ತು ಕಾಲೇಜು ಗ್ರಂಥಾಲಯಗಳಲ್ಲಿ ಲಭ್ಯವಾಗಬೇಕು. ಈ ಮೂಲಕ ಯುವಜನತೆ ಶಿಸ್ತುಬದ್ಧ ಆಲೋಚನೆ ನಿರೂಪಿಸಲು ಸಹಕಾರಿಯಾಗಲಿದೆ. ಗ್ರಂಥಾಲಯಗಳ ಬಗ್ಗೆ ಮುನ್ನೋಟವಿಲ್ಲದ ಸರಕಾರಗಳು ಪುಸ್ತಕ ಖರೀದಿಯನ್ನೇ ನಿಲ್ಲಿಸಿವೆ ಎಂದು ತಿಳಿಸಿದರು.

ಕನ್ನಡ ಭಾಷೆಗೆ ಗಾಂಧೀಜಿ, ಲೋಹಿಯಾ, ಅಂಬೇಡ್ಕರ್ ಅವರ ಸಮಗ್ರ ಬರಹಗಳು ಅನುವಾದವಾಗಿವೆ. ಇದೀಗ ಕಾರ್ಲ್‌ಮಾಕ್ಸ್ ಸಮಗ್ರ ಬರಹಗಳೂ ಅನುವಾದವಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮಾರ್ಕ್ಸ್‌ವಾದ ವೈಜ್ಞಾನಿಕವಾಗಿದ್ದು, ಪ್ರಜಾಪ್ರಭುತ್ವ ಮತ್ತು ಮಾರ್ಕ್ಸ್‌ವಾದ ಒಗ್ಗೂಡಿ ಜಗತ್ತು ರೂಪಿಸಬೇಕಾಗಿದೆ ಎಂದರು.

ಹಿರಿಯ ಸಾಹಿತಿ ಡಾ.ಜಿ.ರಾಮಕೃಷ್ಣ ಮಾತನಾಡಿ, ಮಾರ್ಕ್ಸ್‌ವಾದಿ ಚಿಂತನೆಗಳು ವೈಜ್ಞಾನಿಕವಾದ ತಳಹದಿ ಹೊಂದಿವೆ. ಮಾರ್ಕ್ಸ್‌ವಾದಿ ಚಿಂತನೆ ಮಾಡುವವರು ಕಮ್ಯುನಿಷ್ಟ್ ಆಗಬೇಕಿದೆ. ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯಗಳಿದ್ದರೂ, ಮಾರ್ಕ್ಸ್ ಕಾಲದಲ್ಲಿ ಎಲ್ಲರೂ ಸಂಘಟಿತರಾಗಿದ್ದರು. ಜಂಟಿ ಹೋರಾಟ ಅಂದಿನ ಸನ್ನಿವೇಶದಲ್ಲಿ ಅಗತ್ಯವಿತ್ತು ಎಂದರು.

ಕ್ರಾಂತಿಕಾರಿಗಳು ಮಾತ್ರ ಕಮ್ಯುನಿಸ್ಟ್‌ರಾಗಿರುವುದಿಲ್ಲ. ಮಾರ್ಕ್ಸ್ ಸಹ ಇದೇ ನೀತಿಯನ್ನು ಅನುಸರಿಸಿದ್ದರು. ಅವರು ಎಲ್ಲರನ್ನೂ ಜೊತೆ ಸೇರಿಸಿಕೊಂಡು ಚಳವಳಿ ಕಟ್ಟಿದ್ದಾರೆ. ಆದರೆ, ಇಂದಿನ ಕಾಲಘಟ್ಟದಲ್ಲಿ ನಾವು ಯಾರೊಂದಿಗೆ ಸಾಗುತ್ತಿದ್ದೇವೆ ಎಂಬ ಸ್ಪಷ್ಟತೆಯಿಲ್ಲ. ಆದುದರಿಂದಾಗಿ, ಮತೀಯವಾದಿಗಳ ಮೆರೆಯುತ್ತಿದ್ದಾರೆ ಎಂದ ಅವರು, ಭಗವದ್ಗೀತೆ ಕಾಲದಲ್ಲಿಯೇ ಇಂಟರ್‌ನೆಟ್ ಇತ್ತು ಎಂಬ ವಾದ ಮಂಡಿಸುವ ವ್ಯಕ್ತಿಗಳು ಅಧಿಕಾರದಲ್ಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಫ್ರಾನ್ಸ್‌ನಲ್ಲಿ ಅಂತರ್ಯುದ್ಧ ಕೃತಿಯ ಬಗ್ಗೆ ಡಾ.ಬಿ.ಆರ್. ಮಂಜುನಾಥ್ ಮತ್ತು ತತ್ವಶಾಸದ ದಾರಿದ್ರ್ಯ ಕೃತಿಯ ಬಗ್ಗೆ ಪ್ರೊ.ವಿ.ಎನ್. ಲಕ್ಷ್ಮೀನಾರಾಯಣ್ ಪರಿಚಯಿಸಿದರು. ಅನುವಾದಕರಾದ ವಿಶ್ವ ಕುಂದಾಪುರ, ಕೆ.ಪಿ.ವಾಸುದೇವನ್ ಮತ್ತು ಕೆ.ಎಸ್.ಪಾರ್ಥಸಾರಥಿ ಮತ್ತಿತರರು ಉಪಸ್ಥಿತರಿದ್ದರು.

‘ಭಾರತ ದೇಶದಲ್ಲಿ ಎಡಚಳುವಳಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತಿದ್ದೇವೆ. ದೇಶದಲ್ಲಿ ಮಾರ್ಕ್ಸ್‌ವಾದಿ ಚಿಂತನೆಯನ್ನು ಪ್ರಸ್ತುತಪಡಿಸುವ ಅನಿವಾರ್ಯತೆಯಿದೆ. ಮಾರ್ಕ್ಸ್‌ವಾದದ ಬಗ್ಗೆ ಬಹಳಷ್ಟು ಜನ ವಿಮರ್ಶೆ ಮಾಡಿದ್ದಾರೆ. ಆದರೆ, ಮೂಲತಃ ಮಾರ್ಕ್ಸ್‌ವಾದವನ್ನು ಅಭ್ಯಾಸ ಮಾಡಿ ವಿಮರ್ಶೆ ಬರೆದವರು ಕಡಿಮೆ’
-ಜಿ.ವಿ.ಶ್ರೀರಾಮರೆಡ್ಡಿ ಸಿಪಿಎಂ ರಾಜ್ಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News