ಬನಾರಸ್ ಹಿಂದು ವಿವಿಯ ಮ್ಯೂಝಿಯಂನಲ್ಲಿ ಜನಾಕರ್ಷಣೆಯಾಗಿರುವ ಟಿಪ್ಪು ಸುಲ್ತಾನರ ಶಂಖ

Update: 2018-05-20 15:50 GMT

ಲಕ್ನೋ,ಮೇ 20: 18ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನರ ಕಾಲದಲ್ಲಿ ಯುದ್ಧದ ಆರಂಭ ಅಥವಾ ಅಂತ್ಯವನ್ನು ಸೂಚಿಸಲು ಊದುತ್ತಿದ್ದ ಶಂಖವು ಈಗ ಬನಾರಸ್ ವಿಶ್ವವಿದ್ಯಾನಿಲಯದ ಮ್ಯೂಝಿಯಂ ಭಾರತ ಕಲಾ ಭವನ(ಬಿಕೆಬಿ)ದಲ್ಲಿ ಭಾರೀ ಸಂಖ್ಯೆಯಲ್ಲಿ ವೀಕ್ಷಕರನ್ನು ಆಕರ್ಷಿಸುತ್ತಿದೆ.

 ಮೇ 18ರಂದು ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನದ ಅಂಗವಾಗಿ ಈ ಶಂಖವನ್ನು ಮ್ಯೂಝಿಯಮ್‌ನ ಸೆಂಟ್ರಲ್ ಹಾಲ್‌ನಲ್ಲಿ ಪ್ರದರ್ಶಿಸಲಾಗಿತ್ತು.

ಭಾರತ ಕಲಾಭವನದಲ್ಲಿ ಸಂರಕ್ಷಿಸಲಾಗಿರುವ ಈ ಶಂಖವು 18ನೇ ಶತಮಾನದ್ದಾಗಿದ್ದು,15 ಇಂಚು ಉದ್ದ ಮತ್ತು 10 ಇಂಚು ಎತ್ತರವಿದೆ. ಟಿಪ್ಪು ಸುಲ್ತಾನರು ಯುದ್ಧದ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ಈ ಶಂಖವನ್ನು ಊದುತ್ತಿದ್ದರು ಎಂದು ಬಿಕೆಬಿಯ ನಿರ್ದೇಶಕ ಪ್ರೊ.ಎ.ಕೆ.ಸಿಂಗ್ ಅವರು ತಿಳಿಸಿದರು.

ಈ ಶಂಖವು ಬ್ರಿಟಿಷ್‌ರಿಗೆ ತೀವ್ರ ಪ್ರತಿರೋಧವನ್ನೊಡ್ಡಿದ್ದ ಟಿಪ್ಪು ಸುಲ್ತಾನರಿಗೆ ಸೇರಿದ್ದು ಎನ್ನುವುದು ಮ್ಯೂಝಿಯಮ್‌ಗೆ ಭೇಟಿ ನೀಡುವವರಿಗೆ ಗೊತ್ತಾದ ಬಳಿಕ ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಇದೊಂದು ವಿಶಿಷ್ಟವಾದ ಶಂಖವಾಗಿದ್ದು,ಇತರ ಶಂಖಗಳಿಗೆ ಹೋಲಿಸಿದರೆ ಗಾತ್ರದಲ್ಲಿ ದೊಡ್ಡದಾಗಿದೆ. ಲಭ್ಯ ಮಾಹಿತಿಯಂತೆ ಈ ಶಂಖವು ಟಿಪ್ಪು ಸುಲ್ತಾನರ ನಂಬಿಕಸ್ಥ ಸೇನಾಧಿಕಾರಿಯೋರ್ವರ ವಶದಲ್ಲಿರುತ್ತಿತ್ತು ಎಂದ ಸಿಂಗ್, ಸಾರ್ವಜನಿಕರು ಶಂಖದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದರಿಂದ ಅದನ್ನು ಶಾಶ್ವತವಾಗಿ ಪ್ರದರ್ಶಿಸಲು ಬಿಕೆಬಿ ನಿರ್ಧರಿಸಿದೆ ಎಂದರು.

ಟಿಪ್ಪು ಸುಲ್ತಾನರಿಗೆ ಅಗತ್ಯವಾದಾಗ ಸೇನಾಧಿಕಾರಿಗಳು ಈ ಶಂಖವನ್ನು ಅವರಿಗೆ ನೀಡುತ್ತಿದ್ದರು. ಸಾಯುವವರೆಗೂ ಈ ಶಂಖ ಸುಲ್ತಾನರ ಬಳಿಯೇ ಇತ್ತು.

  1799ರಲ್ಲಿ ನಾಲ್ಕನೇ ಆಂಗ್ಲೊ-ಮೈಸೂರು ಯುದ್ಧದಲ್ಲಿ ಟಿಪ್ಪು ಕೊಲ್ಲಲ್ಪಟ್ಟ ಬಳಿಕ ಅವರ ಶಂಖ,ಖಡ್ಗ,ಬಾಕು ಮತ್ತು ಸಂಗೀತವಾದ್ಯ ತಾಳವನ್ನು ಲಾರ್ಡ್ ಕಾರ್ನವಾಲಿಸ್ ಆಗ ಈಸ್ಟ್ ಇಂಡಿಯಾ ಕಂಪನಿಗೆ ಆಹಾರ ಧಾನ್ಯಗಳನ್ನು ಪೂರೈಸುತ್ತಿದ್ದ ಶಾ ಮನೋಹರ ದಾಸ್‌ಗೆ ನೀಡಿದ್ದ. ದಾಸ್ ಕಂಪನಿಗೆ ಒದಗಿಸಿದ್ದ ಸೇವೆಯಿಂದ ಆತ ಪ್ರಭಾವಿತನಾಗಿದ್ದ ಎಂದು 1969ರಲ್ಲಿ ಪ್ರಕಟಗೊಂಡಿದ್ದ ಇತಿಹಾಸ ಪುಸ್ತಕ ‘ಶಾ ವಂಶಾವಳಿ’ಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಿಂಗ್ ತಿಳಿಸಿದರು.

ಬಿಕೆಬಿಯ ಸ್ಥಾಪಕರಲ್ಲೊಬ್ಬರಾದ ರಾಯ್ ಕೃಷ್ಣದಾಸ್ ಅವರು 1960ರ ದಶಕದಲ್ಲಿ ದಾಸ್ ವಂಶಸ್ಥರಿಂದ ಈ ಶಂಖವನ್ನು ಪಡೆದುಕೊಂಡಿದ್ದರು. ಅದನ್ನು ಬಿಕೆಬಿಯಲ್ಲಿ ಸಂರಕ್ಷಿಸಿಡಲಾಗಿದ್ದು,ಯಾವುದೇ ಸಂಖ್ಯೆಯನ್ನು ನೀಡಿರಲಿಲ್ಲ. ಹೀಗಾಗಿ ಹೆಚ್ಚಿನ ಜನರಿಗೆ ಅದರ ಬಗ್ಗೆ ಗೊತ್ತಿರಲಿಲ್ಲ. 1994,ನ.22ರಂದು ಅದನ್ನು ಮ್ಯೂಝಿಯಮ್‌ನ ಪುಸ್ತಕದಲ್ಲಿ ದಾಖಲಿಸಲಾಗಿತ್ತು ಎಂದು ಸಿಂಗ್ ವಿವರಿಸಿದರು.

 ಶಂಖನಾದವು ಸಾಮಾನ್ಯ ಪದ್ಧತಿಯಾಗಿದ್ದು,ಅದನ್ನು ಭಾರತದ ವಿವಿಧ ಭಾಗಗಳಲ್ಲಿಯ ಆಡಳಿತಗಾರರು ಅನುಸರಿಸುತ್ತಿದ್ದರು. ಮುಘಲರು ಭಾರತದಲ್ಲಿ ಆಡಳಿತ ಆರಂಭಿಸಿದಾಗ ಯುದ್ಧದ ಆರಂಭವನ್ನು ಸೂಚಿಸಲು ಕಹಳೆಯನ್ನು ಬಳಸುತ್ತಿದ್ದರು. ಆದರೆ ಟಿಪ್ಪು ಸುಲ್ತಾನರು ಭಾರತೀಯರಾಗಿದ್ದರಿಂದ ಮತ್ತು ಭಾರತೀಯ ಸಂಪ್ರದಾಯಗಳನ್ನು ಅರಿತಿದ್ದರಿಂದ ಶಂಖವನ್ನು ಬಳಸುತ್ತಿದ್ದರು ಎಂದು ಬನಾರಸ ವಿವಿಯ ಪ್ರೊ.ರಾಜೀವ ಶ್ರೀವಾಸ್ತವ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News