ನ್ಯಾ.ಲೋಯಾ ಸಾವು ಪ್ರಕರಣ: ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ ಬಾಂಬೆ ಲಾಯರ್ಸ್ ಅಸೋಸಿಯೇಶನ್

Update: 2018-05-21 07:16 GMT

ಹೊಸದಿಲ್ಲಿ, ಮೇ 21: ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್. ಲೋಯಾ ಶಂಕಾಸ್ಪದ ಸಾವು ಪ್ರಕರಣದ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ ಬಾಂಬೆ ಲಾಯರ್ಸ್ ಅಸೋಸಿಯೇಶನ್ ಸಲ್ಲಿಸಿದ್ದ ಅಪೀಲನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದ್ದರೆ, ಅಸೋಸಿಯೇಶನ್ ಇದೀಗ ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಮತ್ತೆ ಸುಪ್ರೀಂ ಕೋರ್ಟ್ ಕದ ತಟ್ಟಿದೆ.

ಹಿರಿಯ ವಕೀಲ ದುಷ್ಯಂತ್ ದವೆ ಮೂಲಕ ಸಲ್ಲಿಸಲಾಗಿರುವ ಈ ಪುನರ್ ಪರಿಶೀಲನಾ ಅರ್ಜಿಯಲ್ಲಿ  "ಈ ಅಪೀಲುಗಳು ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಲು ಹಾಗೂ ನ್ಯಾಯಾಂಗ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕಡಿಮೆಗೊಳಿಸುವ ಒಂದು ತೆರೆಮರೆಯ ಪ್ರಯತ್ನ'' ಎಂದು ನ್ಯಾಯಾಲಯ ತನ್ನ ಹಿಂದಿನ ತೀರ್ಪಿನಲ್ಲಿ ಮಾಡಿರುವ ಉಲ್ಲೇಖವನ್ನು ತೆಗೆದು ಹಾಕುವಂತೆಯೂ ಮನವಿ ಮಾಡಲಾಗಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ್  ಅವರನ್ನೊಳಗೊಂಡ ಪೀಠ ಲೋಯಾ ಸಾವಿನ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಎಲ್ಲಾ ಅಪೀಲುಗಳನ್ನೂ ಎಪ್ರಿಲ್ 19ರ ತನ್ನ ಆದೇಶದಲ್ಲಿ ತಿರಸ್ಕರಿಸಿತ್ತು.

"ತಾನೇನೂ ಈ ಪ್ರಕರಣವನ್ನು ನ್ಯಾಯಾಂಗದ ವಿರುದ್ಧ ದಾಳಿ ನಡೆಸಲು ಉಪಯೋಗಿಸುತ್ತಿಲ್ಲ, ಬದಲಾಗಿ ಬಾಂಬೆ ಲಾಯರ್ಸ್ ಅಸೋಸಿಯೇಶನ್  ಪ್ರತಿಯೊಬ್ಬ ನ್ಯಾಯಾಧೀಶರ ಜೀವನದಲ್ಲಿನ ಕಷ್ಟ ಕಾಲದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಲ್ಲುವುದು ಎಂದು ಭರವಸೆ ನೀಡುವ ಉದ್ದೇಶ ಹೊಂದಿದೆ. ಕೇವಲ ಸ್ವತಂತ್ರ ತನಿಖೆಗೆ ಆಗ್ರಹವಾಗಿದೆಯೇ ಹೊರತು ಇನ್ನೇನಲ್ಲ'' ಎಂದೂ ಅದು ತನ್ನ ಮೇಲ್ಮನವಿ  ಅರ್ಜಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News