ಒಂದು ಕುಟುಂಬದ ಎಲ್ಲ ಕನಸುಗಳನ್ನು ಭಗ್ನಗೊಳಿಸಿದ ‘ನಿಪಾ’

Update: 2018-05-21 10:00 GMT
ಚಿತ್ರ ಕೃಪೆ: madhyamam.com

ಕಲ್ಲಿಕೋಟೆ, ಮೇ 21: ಕೇರಳದಾದ್ಯಂತ ಭೀತಿ ಹುಟ್ಟಿಸಿರುವ ‘ನಿಪಾ’ ಜ್ವರ ಒಂದು ಕುಟುಂಬದ ಎಲ್ಲ ಕನಸ್ಸುಗಳನ್ನು ಭಗ್ನಗೊಳಿಸಿದೆ. ಕಲ್ಲಿಕೋಟೆ ಪಂದಿರಿಕ್ಕರ ಸೂಪ್ಪಿಕ್ಕಡದ ವಳಚ್ಚುಕೆಟ್ಟಿಯಿಲ್ ಮೂಸಾ ಅವರ ಕುಟುಂಬ ಈಗಾಗಲೇ ಮೂವರು ಸದಸ್ಯರನ್ನು ಕಳೆದುಕೊಂಡಿದೆ. ಮೂಸಾರಿಗೆ ನಾಲ್ವರು ಮಕ್ಕಳಿದ್ದು, ಮೂವರು ಮೃತಪಟ್ಟಿದ್ದಾರೆ. ಇಬ್ಬರು ‘ನಿಪಾ’ ವೈರಸ್‍ಗೆ ಬಲಿಯಾದರೆ, ಮೂರನೆ ಪುತ್ರ ಮುಹಮ್ಮದ್ ಸಾಲಿಮ್ 2013ರಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ.

ಸಾಲಿಮ್‍ನನ್ನು ಕಳೆದುಕೊಂಡ ನೋವು ವಾಸಿಯಾಗುವಷ್ಟರಲ್ಲಿ ಎರಡನೆ ಪುತ್ರ ಸಾಬಿತ್(23) ಮೇ 5ರಂದು ಜ್ವರದಿಂದ ಮೃತಪಟ್ಟಿದ್ದಾರೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದಾತ ಅಲ್ಸರ್ ಚಿಕಿತ್ಸೆಗೆಂದು ಊರಿಗೆ ಬಂದಿದ್ದ. ಹೊಟ್ಟೆಗೆ ಸಂಬಂಧಿಸಿದ  ಸಮಸ್ಯೆಯಿಂದ ಸಾಬಿತ್ ಮೃತಪಟ್ಟಿದ್ದಾನೆ ಎಂದು ಮನೆಮಂದಿ ಭಾವಿಸಿದ್ದರು. ಆದರೆ ಸಾಬಿತ್ ನಿಧನ ಹೊಂದಿ ಐದನೆ ದಿವಸ ಆತನ ಅಣ್ಣ ಸಾಲಿಹ್‍ಗೆ ಜ್ವರದಿಂದ ಬಳಲಲಾರಂಭಿಸಿದ. ಕುಟ್ಯಡಿ ತಾಲೂಕಾಸ್ಪತ್ರೆ ಹಾಗು ಪೆರಾಂಬ್ರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜ್ವರ ಕಡಿಮೆಯಾಗಲಿಲ್ಲ. ನಂತರ ಕಲ್ಲಿಕೋಟೆ ಬೇಬಿ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ತಂದೆ ಮೂಸಾರಿಗೂ ಸಾಲಿಹ್ ಪತ್ನಿ ಆತಿಫಾ ಕೂಡ ಜ್ವರಕ್ಕೆ ತುತ್ತಾದರು. ಅವರನ್ನು ಕೂಡಾ ಬೇಬಿ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ವಾಲಿಹ್‍ ರ ದೊಡ್ಡಮ್ಮ ಮರಿಯಂರನ್ನೂ ಜ್ವರ ಬಿಡಲಿಲ್ಲ.

ಸ್ವಾಲಿಹ್ ಶುಕ್ರವಾರ, ಮರಿಯಂ ಶನಿವಾರ ಜ್ವರಕ್ಕೆ ಬಲಿಯಾದರು. ಮೂಸಾರ ಸ್ಥಿತಿ ಚಿಂತಾಜನಕವಾಗಿದೆ. ಆತಿಫಾಳನ್ನು ಚಿಕಿತ್ಸೆಗಾಗಿ ಎರ್ನಾಕುಳಂ ಅಮೃತಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿದೇಶದಲ್ಲಿದ್ದ ಸಾಲಿಹ್, ಸಾಬಿತ್‍ಗಿಂತ ಎರಡು ತಿಂಗಳು ಮೊದಲು ಊರಿಗೆ ಬಂದಿದ್ದ. ಸಿವಿಲ್ ಇಂಜಿನಿಯರ್ ಆಗಿರುವ ಸಾಲಿಹ್ ಕಲ್ಲಿಕೋಟೆಯಲ್ಲಿ ಕೆಲಸದಲ್ಲಿದ್ದ.  ಈ ಹಿಂದೆ ಇವರು ವಾಸವಿದ್ದ ಮನೆ ಮಾರಿ ಹತ್ತಿರದಲ್ಲಿ ಮನೆ ಮತ್ತು ಜಾಗ ಖರೀದಿಸಿದ್ದರು.

ರಮಝಾನ್ ನಂತರ ಅಲ್ಲಿಗೆ ವಾಸ್ತವ್ಯ ಬದಲಾಯಿಸುವ ಯೋಜನೆ ಹಾಕಿದ್ದರು. ಅಲ್ಲಿಯೇ ಸಾಬಿತ್‍ಗೆ ಮದುವೆ ಮಾಡಿಸುವುದೆಂದು ಕುಟುಂಬ ಯೋಜನೆ ಹಾಕಿಕೊಂಡಿತ್ತು. ಆದರೆ, ಹೊಸ ಮನೆಯ ಕನಸು, ಮದುವೆ ಎಲ್ಲವೂ ಹಾಗೆಯೇ ಬಾಕಿ ಉಳಿದಿದೆ. ಸಾಲಿಹ್, ಸಾಬಿತ್ ಇಹಲೋಕ ತ್ಯಜಿಸಿಯಾಗಿದೆ. ಮೂವರು ಮಕ್ಕಳನ್ನು ಕಳೆದುಕೊಂಡಿದ್ದ ಸೂಫಿಕ್ಕಡದ ಸಂಬಂಧಿಕರ ಮನೆಯಲ್ಲಿ ಕೊನೆಯ ಪುತ್ರ ಮುತ್ತಲಿಬ್ ಜೊತೆ ವಾಸಿಸುತ್ತಿದ್ದ ದೊಡ್ಡಮ್ಮ ಮರಿಯಂ ಕೂಡಾ ಇಹಲೋಕ ತ್ಯಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News