ಪತ್ನಿಯನ್ನು ಭಾರತದಲ್ಲಿ ತ್ಯಜಿಸಿ ತೆರಳುವ ಎನ್‌ಆರ್‌ಐಗಳ ವಿರುದ್ಧ ಕಠಿಣ ಕ್ರಮಕ್ಕೆ ನಿರ್ಧಾರ

Update: 2018-05-21 16:43 GMT

ಹೊಸದಿಲ್ಲಿ, ಮೇ 21: ಮದುವೆಯಾಗಿ ಆ ಬಳಿಕ ತಮ್ಮ ಪತ್ನಿಯನ್ನು ಭಾರತದಲ್ಲಿ ಪರಿತ್ಯಜಿಸಿ ಉದ್ಯೋಗ ಅಥವಾ ಅಧ್ಯಯನದ ನಿಮಿತ್ತ ವಿದೇಶಕ್ಕೆ ತೆರಳಿ ಅಲ್ಲೇ ನೆಲೆಸುವ ಪ್ರಕರಣ ಹೆಚ್ಚುತ್ತಿರುವ ಕಾರಣ ಇದನ್ನು ನಿಯಂತ್ರಿಸಲು ಕೆಲವು ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಕಾನೂನು ಇಲಾಖೆ ತಿಳಿಸಿದೆ. ಇಂತಹ ವ್ಯಕ್ತಿಗಳ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವುದು, ಆಸ್ತಿಗಳನ್ನು ಜಪ್ತಿ ಮಾಡುವುದು ಮುಂತಾದ ಕ್ರಮಗಳನ್ನು ಅಂತರ್ ಸಚಿವಾಲಯ ತಂಡ ಶಿಫಾರಸು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿತ್ಯಕ್ತ ಪತ್ನಿಯರಿಗೆ ನೆರವಾಗುವ ನಿಟ್ಟಿನಲ್ಲಿ ಕೈಗೊಂಡಿರುವ ಉಪಕ್ರಮಗಳು ಸ್ಥಗಿತಗೊಂಡಿದ್ದು ಇದಕ್ಕೆ ಮತ್ತೆ ಚಾಲನೆ ನೀಡಲು ಹಾಗೂ ಈ ಉಪಕ್ರಮಗಳು ಹಳಿತಪ್ಪದಂತೆ ನೋಡಿಕೊಳ್ಳಲು ತಕ್ಷಣ ಮತ್ತೊಂದು ಸಭೆ ಕರೆಯಬೇಕೆಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಮೇನಕಾ ಗಾಂಧಿ ವಿದೇಶ ವ್ಯವಹಾರ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಒತ್ತಾಯಿಸಿದ್ದಾರೆ. ಸತತ ಸಮನ್ಸ್‌ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದ ಅನಿವಾಸಿ ಪುರುಷರ ವಿರುದ್ಧ ಕಾನೂನು ಸಚಿವಾಲಯ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪತ್ನಿಯರನ್ನು ಪರಿತ್ಯಜಿಸಿ ಹೋಗಿರುವ ಬಗ್ಗೆ 2014ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ 346 ದೂರುಗಳು ದಾಖಲಾಗಿವೆ. ಹೆಚ್ಚಿನ ಪ್ರಕರಣಗಳಲ್ಲಿ ಮದುವೆಯಾದ ಬಳಿಕ ಪತ್ನಿಯನ್ನು ಭಾರತದಲ್ಲೇ ಬಿಟ್ಟು, ಆಕೆಯ ಪಾಸ್‌ಪೋರ್ಟ್ ಅನ್ನು ಪತಿ ವಿದೇಶಕ್ಕೆ ಕೊಂಡೊಯ್ದಿದ್ದಾನೆ. ಮದುವೆಯಾದ ಬಳಿಕ ನಾಪತ್ತೆಯಾಗುವುದು, ವಿದೇಶಕ್ಕೆ ಕರೆದೊಯ್ದು ಅಲ್ಲಿ ಬಿಟ್ಟು ಪರಾರಿಯಾಗುವುದು, ಅಥವಾ ಮಕ್ಕಳನ್ನು ವಿದೇಶಕ್ಕೆ ಕರೆದೊಯ್ದು ತಾಯಿಯೊಂದಿಗೆ ಸಂಪರ್ಕವಿಲ್ಲದಂತೆ ಮಾಡುವುದು ಮುಂತಾದ ಪ್ರಕರಣಗಳು ಇದರಲ್ಲಿವೆ, ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಿವೆ. ಆದರೆ ಕೆಲವರು ಮಾತ್ರ ದೂರು ನೀಡಲು ಮುಂದೆ ಬರುತ್ತಾರೆ ಎಂದು ಆಯೋಗ ತಿಳಿಸಿದೆ.

ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಅವಲೋಕನ ನಡೆಸುವ ನಿಟ್ಟಿನಲ್ಲಿ 2017ರಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಸಚಿವರಾದ ನಿತಿನ್ ಗಡ್ಕರಿ, ರವಿಶಂಕರ್ ಪ್ರಸಾದ್, ಮೇನಕಾ ಗಾಂಧಿ, ಸ್ಮತಿ ಇರಾನಿ, ನರೇಂದ್ರ ಸಿಂಗ್ ತೋಮರ್ ಮತ್ತು ವಿ.ಕೆ.ಸಿಂಗ್ ಸಮಿತಿಯ ಸದಸ್ಯರಾಗಿದ್ದಾರೆ. ಎನ್‌ಆರ್‌ಐಗಳಿಗೆ ಜಾರಿಗೊಳಿಸಲಾಗಿರುವ ಸಮನ್ಸ್‌ಗಳು ತಿರಸ್ಕೃತಗೊಂಡರೆ ಅವುಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸುವಂತೆ ಹಾಗೂ ಇವನ್ನು ಜಾರಿಯಾಗಬೇಕಾದ ಸಮನ್ಸ್ ಎಂದು ಪರಿಗಣಿಸುವಂತೆ ವಿದೇಶ ವ್ಯವಹಾರ ಇಲಾಖೆಗೆ ಸಮಿತಿ ಸಲಹೆ ನೀಡಿದೆ .

 ಈಗಿರುವ ವ್ಯವಸ್ಥೆಯಂತೆ, ಮಹಿಳೆ ದೂರು ಸಲ್ಲಿಸಿದ ಬಳಿಕ ಈ ಬಗ್ಗೆ ಪೊಲೀಸರು ರಾಯಭಾರಿ ಕಚೇರಿಗೆ ಪತ್ರ ಬರೆಯುತ್ತಾರೆ. ನಂತರ ರಾಯಭಾರಿ ಕಚೇರಿ ಸಮನ್ಸ್ ಜಾರಿಗೊಳಿಸುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ವಿಳಾಸ ತಪ್ಪಾಗಿರುತ್ತದೆ ಅಥವಾ ಆ ವ್ಯಕ್ತಿ ಬೇರೆ ಸ್ಥಳಕ್ಕೆ ತೆರಳಿರುವ ಕಾರಣ ಸಮನ್ಸ್ ಸ್ವೀಕೃತವಾಗಿರುವುದಿಲ್ಲ.

ಆದರೆ ಕಾನೂನು ಸಚಿವಾಲಯ ಈ ಸಲಹೆಗೂ ಒಪ್ಪಿಗೆ ನೀಡಿಲ್ಲ. ಸಲಹೆಯನ್ನು ಕಾರ್ಯಗತ ಮಾಡುವ ನಿಟ್ಟಿನಲ್ಲಿ ಕಾನೂನಿನಲ್ಲಿ ಸೂಕ್ತ ಬದಲಾವಣೆ ಮಾಡುವಂತೆ ಸಚಿವೆ ಮೇನಕಾ ಗಾಂಧಿ ಗೃಹ ಹಾಗೂ ಕಾನೂನು ಸಚಿವಾಲಯಕ್ಕೆ ಪತ್ರ ಬರೆದು ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News