ಅರುಣಾಚಲ ಪ್ರದೇಶದ ಗಡಿಯಲ್ಲಿರುವ ಟಿಬೆಟ್‌ನಲ್ಲಿ ಚಿನ್ನದ ಗಣಿಗಾರಿಕೆ ತನ್ನ ಸಾರ್ವಭೌಮ ಹಕ್ಕು: ಚೀನಾ ಹೇಳಿಕೆ

Update: 2018-05-21 17:19 GMT

ಬೀಜಿಂಗ್,ಮೇ 21: ಭಾರತದ ಅರುಣಾಚಲ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಟಿಬೆಟ್‌ನ ಖನಿಜ ಸಮೃದ್ಧ ಲುಂಝ್‌ನಲ್ಲಿ ಭಾರೀ ಪ್ರಮಾಣದಲ್ಲಿ ಚಿನ್ನದ ಗಣಿಗಾರಿಕೆಯನ್ನು ಆರಂಭಿಸಿರುವುದು ಉಭಯ ರಾಷ್ಟ್ರಗಳ ನಡುವೆ ಇನ್ನೊಂದು ಸಂಘರ್ಷಕ್ಕೆ ಕಾರಣವಾಗಲಿದೆ ಎಂಬ ವಿಶ್ಲೇಷಣೆಗಳ ನಡುವೆಯೇ ಸೋಮವಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಕಮ್ಯುನಿಸ್ಟ್ ರಾಷ್ಟ್ರವು,ಆ ಪ್ರದೇಶವು ತನಗೆ ಸೇರಿದೆ ಮತ್ತು ಅಲ್ಲಿ ಇಂತಹ ಭೂವೈಜ್ಞಾನಿಕ ಚಟುವಟಿಕೆಗಳನ್ನು ನಡೆಸುವ ಸಂಪೂರ್ಣ ಸಾರ್ವಭೌಮತೆಯನ್ನು ತಾನು ಹೊಂದಿದ್ದೇನೆ ಎಂದು ಹೇಳಿಕೊಂಡಿದೆ.

ಲುಂಝ್‌ನಲ್ಲಿ ಸುಮಾರು 60 ಶತಕೋಟಿ ಡಾಲರ್ ಮೌಲ್ಯದ ಅಮೂಲ್ಯ ಖನಿಜಗಳ ಭಾರೀ ನಿಕ್ಷೇಪವು ಪತ್ತೆಯಾಗಿದ್ದು,ಚೀನಾ ಅಲ್ಲಿ ಗಣಿಗಾರಿಕೆಯನ್ನು ಆರಂಭಿಸಿದೆ ಎಂದು ಹಾಂಗ್‌ಕಾಂಗ್‌ನ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ರವಿವಾರ ವರದಿ ಮಾಡಿತ್ತು.

ಇಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಅವರು ಪ್ರಶ್ನೆಯೊಂದಕ್ಕೆ,‘‘ನಾನು ನೀವು ಉಲ್ಲೇಖಿಸಿರುವ ವರದಿಯನ್ನೂ ಗಮನಿಸಿದ್ದೇನೆ. ವರದಿಯಲ್ಲಿ ಉಲ್ಲೇಖಿಸಿರುವ ಪ್ರದೇಶವು ಸಂಪೂರ್ಣವಾಗಿ ಚೀನಾಕ್ಕೆ ಸೇರಿದೆ. ಚೀನಾ ತನ್ನ ಸ್ವಂತ ಪ್ರದೇಶದಲ್ಲಿ ನಿಯಮಿತವಾಗಿ ಭೂವೈಜ್ಞಾನಿಕ ಮತ್ತು ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುತ್ತಿದೆ. ಅದು ಸಂಪೂರ್ಣವಾಗಿ ಚೀನಾದ ಸಾರ್ವಭೌಮತೆಗೆ ಒಳಪಟ್ಟಿದೆ. ಚೀನಾ ಪರಿಸರ ಸಂರಕ್ಷಣೆಗೆ ಸದಾ ಮಹತ್ವವನ್ನು ನೀಡುತ್ತದೆ. ಆಧಾರರಹಿತ ವರದಿಗಳಿಗೆ ಪ್ರಚಾರ ನೀಡುವುದರಿಂದ ಮಾಧ್ಯಮಗಳು ದೂರವಿರುತ್ತವೆ ಎಂದು ನಾವು ಆಶಿಸಿದ್ದೇವೆ’’ ಎಂದು ಉತ್ತರಿಸಿದರು.

ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ನ ಭಾಗವಾಗಿದೆಯೆಂದು ಚೀನಾ ಪ್ರತಿಪಾದಿಸುತ್ತಿದೆ. ಭಾರತ-ಚೀನಾ ಗಡಿ ವಿವಾದವು ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ 3,488 ಕಿ.ಮೀ.ಉದ್ದದಲ್ಲಿಯ ಪ್ರದೇಶಗಳ ನ್ನೊಳಗೊಂಡಿದೆ.

ಪ್ರದೇಶದಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿರುವ ಸ್ಥಿತಿಯನ್ನು ಸೃಷ್ಟಿಸಲು ಚೀನಾ ತ್ವರಿತವಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುತ್ತಿದೆ ಎಂಬ ವರದಿಯ ಭಾಗದ ಕುರಿತಂತೆ ಲು ಅವರು,‘‘ಭಾರತ-ಚೀನಾ ಗಡಿಯ ಕುರಿತು ನಮ್ಮ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ. ತಥಾಕಥಿತ ಅರುಣಾಚಲ ಪ್ರದೇಶಕ್ಕೆ ಚೀನಾ ಎಂದೂ ಮಾನ್ಯತೆ ನೀಡಿಲ್ಲ’’ಎಂದು ಹೇಳಿದರು.

ಗಡಿವಿವಾದಕ್ಕೆ ನ್ಯಾಯಯುತ ಮತ್ತು ಸಮರ್ಥನೀಯ ಪರಿಹಾರವನ್ನು ಕಂಡುಕೊಳ್ಳಲು ಉಭಯ ರಾಷ್ಟ್ರಗಳು ಮಾತುಕತೆಗಳಲ್ಲಿ ತೊಡಗಿಕೊಂಡಿವೆ ಎಂದ ಅವರು,‘‘ಇಂತಹ ಪರಿಹಾರವೊಂದನ್ನು ಕಂಡುಕೊಳ್ಳುವ ಮುನ್ನ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದಗಳಿಗೆ ಮತ್ತು ಎಲ್‌ಎಸಿಗೆ ಭಾರತವು ಬದ್ಧವಾಗಿರುತ್ತದೆ ಮತ್ತು ಅನಗತ್ಯ ಪ್ರಚಾರವನ್ನು ನಿಲ್ಲಿಸುತ್ತದೆ ಹಾಗೂ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳಲು ಚೀನಾದೊಂದಿಗೆ ಶ್ರಮಿಸುತ್ತದೆ ಎಂದು ನಾವು ಹಾರೈಸುತ್ತೇವೆ’’ ಎಂದರು.

ಚೀನಾದ ಗಣಿಗಾರಿಕೆ ಕಾರ್ಯಾಚರಣೆ ಅರುಣಾಚಲ ಪ್ರದೇಶವನ್ನು ಕಬಳಿಸುವ ಹುನ್ನಾರದ ಭಾಗವಾಗಿದೆಯೆಂದು ಮಾರ್ನಿಂಗ್ ಪೋಸ್ಟ್ ವರದಿಯು ಬಿಂಬಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News