ಪ್ರತಿ ದಿನ 35,000 ಮಂದಿಗೆ ಇಫ್ತಾರ್ ನೀಡುವ ಅಬುಧಾಬಿ ಶೇಖ್ ಝಾಯಿದ್ ಮಸೀದಿ

Update: 2018-05-21 17:39 GMT

ಅಬುಧಾಬಿ, ಮೇ 21: ರಮಝಾನ್ ಅವಧಿಯಲ್ಲಿ ಯುಎಇಯ ಅಬುಧಾಬಿಯಲ್ಲಿರುವ ಶೇಖ್ ಝಾಯಿದ್ ಗ್ರಾಂಡ್ ಮಸೀದಿಯಲ್ಲಿ ಪ್ರತಿ ದಿನ 35,000 ಮಂದಿಗೆ ಉಚಿತ ಇಫ್ತಾರ್ ಭೋಜನ ನೀಡಲಾಗುತ್ತದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಭೋಜನ ತಯಾರಿಸುವುದು ಸುಲಭದ ಕೆಲಸವೇನೂ ಅಲ್ಲ. ಅಡುಗೆಯವರು ಮತ್ತು ಸಹಾಯಕರ ದೊಡ್ಡ ತಂಡವೊಂದು ದಿನವಿಡೀ ಅಡುಗೆ ತಯಾರಿಸುವ ಕೆಲಸದಲ್ಲಿ ತೊಡಗುತ್ತದೆ.

ಸಶಸ್ತ್ರ ಪಡೆಗಳ ಅಧಿಕಾರಿಗಳ ಕ್ಲಬ್ ಮತ್ತು ಹೊಟೇಲ್‌ನ ದೊಡ್ಡ ಅಡುಗೆ ಕೋಣೆಯಲ್ಲಿ 1,000ಕ್ಕೂ ಅಧಿಕ ಮಂದಿ ದಿನವಿಡೀ ಕೆಲಸ ಮಾಡುತ್ತಾರೆ.

ತಂಡದಲ್ಲಿ 350 ಬಾಣಸಿಗರು, 160 ಸ್ಟೀವಾರ್ಡ್‌ಗಳು ಮತ್ತು 450 ಸೇವಾ ಸಿಬ್ಬಂದಿ ಇದ್ದಾರೆ. ಸೇವಾ ಸಿಬ್ಬಂದಿಯು ಖರೀದಿ, ದಾಸ್ತಾನು, ಆರೋಗ್ಯ ಮತ್ತು ಸುರಕ್ಷತೆ ಮುಂತಾದ ವಿಭಾಗಗಳಲ್ಲಿ ಕೆಲಸ ಮಾಡುತ್ತಾರೆ.

‘‘ಪ್ರತಿ ದಿನ ಸಂಜೆ ಉಪವಾಸನಿರತ ಅತಿಥಿಗಳಿಗೆ ಊಟದ ಪೊಟ್ಟಣಗಳನ್ನು ನೀಡುವುದಕ್ಕಾಗಿ ನಾವು ನಮ್ಮ ಸೇವೆಗಳನ್ನು ಹೊಸ ಕಲ್ಪನೆಗಳೊಂದಿಗೆ ಸುಧಾರಿಸಿಕೊಳ್ಳುತ್ತೇವೆ. ಪ್ರತಿ ದಿನ ನಾವು ಪೊಟ್ಟಣಗಳನ್ನು ಅಭಿವೃದ್ಧಿಪಡಿಸುತ್ತೇವೆ, ಉತ್ತಮ ಆರೋಗ್ಯ ಮತ್ತು ಸುರಕ್ಷಾ ದೃಷ್ಟಿಯಿಂದ ಅಡುಗೆಕೋಣೆಯಲ್ಲಿನ ನಮ್ಮ ಸಲಕರಣೆಗಳನ್ನು ಬದಲಿಸುತ್ತೇವೆ’’ ಎಂದು ಅಬುಧಾಬಿಯಲ್ಲಿರುವ ಸಶಸ್ತ್ರ ಪಡೆಗಳ ಅಧಿಕಾರಿಗಳ ಕ್ಲಬ್ ಮತ್ತು ಹೊಟೇಲ್‌ನ ಕಾರ್ಯಕಾರಿ ಬಾಣಸಿಗ ಕ್ಯಾರ್ಸ್ಟನ್ ಗೊಟ್ಸ್‌ಚಾಕ್ ಹೇಳುತ್ತಾರೆ.

ಇದಕ್ಕಾಗಿ 12 ಟನ್ ಕೋಳಿಮಾಂಸ ಮತ್ತು 6 ಟನ್ ಕುರಿ ಮಾಂಸವನ್ನು ಪ್ರತಿ ದಿನ ಬಳಸಲಾಗುತ್ತದೆ. ಇದರ ಜೊತೆಗೆ ಅಕ್ಕಿ, ತರಕಾರಿ, ಟೊಮ್ಯಾಟೊ, ನೀರುಳ್ಳಿ ಸೇರಿದಂತೆ 35 ಟನ್ ಪದಾರ್ಥಗಳನ್ನು ಬಳಸಲಾಗುತ್ತದೆ.

ಆಹಾರ ಪೊಟ್ಟಣದಲ್ಲಿ ಒಂದು ಸೇಬು, ನೀರು, ಖರ್ಜೂರ, ಲಬನ್ ಪಾನೀಯ ಮತ್ತು ಹಣ್ಣಿನ ರಸ ಇರುತ್ತದೆ. ಆಹಾರ ಪೊಟ್ಟಣಗಳನ್ನು ಪ್ಯಾಕ್ ಮಾಡಿದ ಬಳಿಕ, ಅವುಗಳನ್ನು ಸಮೀಪದ ಶೇಖ್ ಝಾಯೆದ್ ಗ್ರಾಂಡ್ ಮಸೀದಿಗೆ ಸಾಗಿಸಲಾಗುತ್ತದೆ.

ಮಸೀದಿಯ ಸಂಕೀರ್ಣದಲ್ಲಿ ಬೃಹತ್ ವಾತಾನುಕೂಲಿ ಡೇರೆಗಳನ್ನು ನಿರ್ಮಿಸಲಾಗಿದೆ. ಪ್ರತಿಯೊಂದು ಡೇರೆಯಲ್ಲೂ 1,500 ಜನರು ಕುಳಿತುಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News