ಮುಕ್ತ-ನ್ಯಾಯ ಸಮ್ಮತ ಚುನಾವಣೆಗೆ ಸಿದ್ಧತೆ: ಚುನಾವಣಾಧಿಕಾರಿ ಮಹೇಶ್ವರ್ ರಾವ್
ಬೆಂಗಳೂರು, ಮೇ 22: ಮತದಾರರ ಗುರುತಿನ ಚೀಟಿ ಪತ್ತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆ ಮೇ 28ಕ್ಕೆ ನಡೆಯಲಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಒಟ್ಟು 421 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಆ ಪೈಕಿ 4-ಕ್ಲಿಷ್ಟಕರ, 47ಅತಿಸೂಕ್ಷ್ಮ, 186 ಸೂಕ್ಷ್ಮ ಹಾಗೂ 184 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಒಟ್ಟು 2,524 ಮಂದಿ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು 14 ಮಂದಿ ಅಭ್ಯರ್ಥಿಗಳಿದ್ದು, ಕ್ಷೇತ್ರದಲ್ಲಿ 2.46 ಲಕ್ಷಕ್ಕೂ ಅಧಿಕ ಪುರುಷ, 2.25 ಲಕ್ಷಕ್ಕೂ ಅಧಿಕ ಮಹಿಳೆಯರು ಸೇರಿದಂತೆ 4.71ಲಕ್ಷಕ್ಕೂ ಅಧಿಕ ಮತದಾರರಿದ್ದಾರೆಂದು ಮಹೇಶ್ವರ್ ರಾವ್ ಮಾಹಿತಿ ನೀಡಿದರು.
ಬಿಗಿ ಬಂದೋಬಸ್ತ್: ಇಬ್ಬರು ಡಿಸಿಪಿ, 15 ಕೆಎಸ್ಸಾರ್ಪಿ ತುಕಡಿ, 9 ಎಂಸಿಸಿ, ಫ್ಲೈಯಿಂಗ್ ಸ್ಕ್ವಾಡ್ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದ ಅವರು, ಮೇ 31ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಮಹೇಶ್ವರ್ ರಾವ್ ಇದೇ ವೇಳೆ ತಿಳಿಸಿದರು.
ಕ್ಲಿಷ್ಟಕರ, ಅತಿಸೂಕ್ಷ್ಮವಾದ 20 ಮತಗಟ್ಟೆಗಳಲ್ಲಿ ವೆಬ್‌ಕ್ಯಾಸ್ಟಿಂಗ್ ಅಳವಡಿಸಲಾಗಿದೆ. 31 ಮತಗಟ್ಟೆಗಳಿಗೆ ವಿಡಿಯೋ ಗ್ರಾಫರ್‌ಗಳನ್ನು ನಿಯೋಜನೆ ಮಾಡಲಾಗಿದೆ. ಒಟ್ಟು 421 ಕಂಟ್ರೋಲ್ ಯೂನಿಟ್, 421 ಬ್ಯಾಲೆಟ್ ಯೂನಿಟ್, 421 ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಲಾಗುವುದು ಎಂದು ಹೇಳಿದರು
ಗುರುತಿನ ಚೀಟಿ ತನಿಖೆ: ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣ ಸಂಬಂಧ ಈಗಾಗಲೇ ಸಂಬಂಧಪಟ್ಟವರಿಗೆ ಗುರುತಿನ ಚೀಟಿ ಹಿಂದಿರುಗಿಸಲಾಗಿದೆ. ಅಲ್ಲದೆ, ಅವರೆಲ್ಲರ ಬಳಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಡಿಸಿಪಿ ಚೇತನ್ ರಾಥೋಡ್, ರವಿ ಚೆನ್ನಣ್ಣನವರ್ ಈ ಪ್ರಕರಣದ ತನಿಖೆಯನ್ನು ನಡೆಸಲಿದ್ದಾರೆ ಎಂದು ಹೇಳಿದರು.
ಮನೆಯೊಂದರಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆ ಹಿನ್ನೆಲೆಯಲ್ಲಿ ಮೇ 12ಕ್ಕೆ ನಡೆಯಬೇಕಿದ್ದ ಚುನಾವಣೆಯನ್ನು ಕೊನೆಕ್ಷಣದಲ್ಲಿ ಮುಂದೂಡಲಾಗಿತ್ತು. ಅಲ್ಲದೆ, ಈ ಪ್ರಕರಣ ಸಂಬಂಧ ಈಗಾಗಲೇ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳ ಉಪಸ್ಥಿತರಿದ್ದರು.
‘ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿರುವ 4 ವಾರ್ಡ್‌ಗಳಲ್ಲಿ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸದರಿ ಮತಗಟ್ಟೆಗಳಲ್ಲಿ ಪೂರ್ಣಪ್ರಮಾಣದಲ್ಲಿ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಏಳು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ’
-ಮಹೇಶ್ವರ್ ರಾವ್, ಚುನಾವಣಾಧಿಕಾರಿ