ರೋಷನ್‌ ಬೇಗ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹ

Update: 2018-05-22 12:53 GMT

ಬೆಂಗಳೂರು, ಮೇ 22: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ 7 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮುಸ್ಲಿಂ ಸಮುದಾಯದ ಶಾಸಕ ರೋಷನ್ ಬೇಗ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಮುಸ್ಲಿಂ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಸಂಚಾಲಕ ಸಮೀವುಲ್ಲಾ ಖಾನ್, ಮುಸ್ಲಿಂ ಸಮುದಾಯ ಹಿಂದುಳಿದಿದ್ದರೂ ಪ್ರತಿ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಾ ಜವಾಬ್ದಾರಿ ನಿರ್ವಹಿಸುತ್ತ ಬಂದಿದೆ. ಆದರೆ, ಮುಸ್ಲಿಮರ ಮತಗಳಿಗೆ ದಂಬಾಲು ಬೀಳುವ ಜಾತ್ಯತೀತ ಪಕ್ಷಗಳು ಸಮುದಾಯಕ್ಕೆ ನೀಡಬೇಕಾದ ಪ್ರಾಸ್ತ್ಯ ನೀಡುತ್ತಿಲ್ಲ ಎಂದು ದೂರಿದರು.

ಈ ಬಾರಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದು, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿದ್ದಾರೆ. ಅವರಿಗೆ ಒಕ್ಕೂಟ ಅಭಿನಂದಿಸುತ್ತದೆ. ಆದರೆ, ಇದೇ ಸಂದರ್ಭದಲ್ಲಿ 7 ಬಾರಿ ಸಮುದಾಯವನ್ನು ಪ್ರತಿನಿಧಿಸಿ ಹಿರಿತನ ಹೊಂದಿರುವ ರೋಷನ್ ಬೇಗ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವಕೀಲ ಸಿ.ಆರ್.ಅಬ್ದುಲ್ ರಷೀದ್ ಮಾತನಾಡಿ, ಕರ್ನಾಟಕದಲ್ಲಿ ಎರಡನೇ ಅತಿ ದೊಡ್ಡ ಸಮುದಾಯವಾಗಿರುವ ಮುಸ್ಲಿಮರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಯತ್ನಿಸಿದ್ದ ಬಿಜೆಪಿ ಚುನಾವಣೆಯಲ್ಲಿ ಒಬ್ಬರಿಗೂ ಟಿಕೆಟ್ ನೀಡಲಿಲ್ಲ. ಜಾತ್ಯತೀತ ಪಕ್ಷಗಳೆಂದು ಹೇಳಿಕೊಳ್ಳುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕಡಿಮೆ ಸಂಖ್ಯೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಿವೆ. ಜನಸಂಖ್ಯೆಯ ಆಧಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಆಯ್ಕೆಯಾಗದಿರುವುದು ಭಾರಿ ನಿರಾಶೆಗೆ ಕಾರಣವಾಗಿದೆ ಎಂದರು.

ಮೊದಲಿನಿಂದಲೂ ಜಾತ್ಯತೀತ ಪಕ್ಷಗಳಿಗೆ ಬೆಂಬಲ ನೀಡುತ್ತಿರುವ ಸಮುದಾಯಕ್ಕೆ ನ್ಯಾಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಮಲ್ಲಿಕಾರ್ಜುನ ಖರ್ಗೆಯವರು ಈ ಸಮುದಾಯದ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಸಂಬಂಧ ಸದ್ಯದಲ್ಲೇ ಜೆಡಿಎಸ್-ಕಾಂಗ್ರೆಸ್ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಅಬ್ದುಲ್ ಕಲಾಂ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಝೀರ್, ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ಉಪಾಧ್ಯಕ್ಷ ಎಚ್.ಎ.ಝಾಕೀರ್‌ ಹುಸೇನ್, ಮಸ್ಜೀದ್ ಎ.ತಾಹ ಪ್ರಧಾನ ಕಾರ್ಯದರ್ಶಿ ಷಹಜಹಾನ್, ಮುಸ್ಲಿಂ ಸೆಕ್ಯುಲರ್ ಸೇನಾದ ಸಾಗರ್ ಸಮೀವುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News