ಪರಮೇಶ್ವರ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹ

Update: 2018-05-22 12:58 GMT
ಡಾ.ಜಿ.ಪರಮೇಶ್ವರ್‌

ಬೆಂಗಳೂರು, ಮೇ 22: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಛಲವಾದಿ ಮಹಾಸಭಾ ಆಗ್ರಹಿಸಿದೆ.

ಕಳೆದ ಚುನಾವಣೆಯಲ್ಲಿ ಪರಮೇಶ್ವರ್ ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗಿದ್ದಾರೆ. ಹೀಗಾಗಿ, ಈ ಬಾರಿಯಾದರೂ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಒಂದು ವೇಳೆ ಆ ಸ್ಥಾನದಿಂದಲೂ ವಂಚಿಸಿದ್ದಲ್ಲಿ ಇಡೀ ದಲಿತ ಸಮುದಾಯದ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಮಹಾಸಭಾದ ರಾಜ್ಯಾಧ್ಯಕ್ಷ ಎಚ್.ಪಿ.ಕುಮಾರ್ ಎಚ್ಚರಿಸಿದ್ದಾರೆ.

ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ದಲಿತ ಸಮುದಾಯದ ಪ್ರಮುಖ ನಾಯಕ ಹಾಗೂ ಅನುಭವಿ ರಾಜಕಾರಣಿಯಾಗಿದ್ದಾರೆ. ಆದರೆ, ಅವರ ಬೆಳವಣಿಗೆಯನ್ನು ಸಹಿಸದ ಕೆಲವರು ಈ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಆದುದರಿಂದಾಗಿ ಪರಮೇಶ್ವರ್ ಸ್ಥಾನದಿಂದ ತೆರವಾಗಲಿರುವ ವಿಧಾನಪರಿಷತ್ ಸ್ಥಾನಕ್ಕೆ ಮಹದೇವಪ್ಪರನ್ನು ಆಯ್ಕೆ ಮಾಡಬೇಕು ಹಾಗೂ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

2018 ರ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಹಾಗೂ ಮಹದೇವಪ್ಪ ಪ್ರಭಾವಿ ಸಚಿವರಾಗುವ ಮೂಲಕ ದಲಿತ ಸಮುದಾಯದ ಆಶಾ ಕಿರಣಗಳಾಗುತ್ತಾರೆ ಎಂಬ ವಿಶ್ವಾಸದಿಂದ ಶೇ.40 ರಷ್ಟು ದಲಿತರು ಕಾಂಗ್ರೆಸ್ ಮತ ಹಾಕಿದ್ದಾರೆ. ಹೀಗಾಗಿ, ಈ ಇಬ್ಬರು ನಾಯಕರಿಗೆ ಸೂಕ್ತವಾದ ಸ್ಥಾನಮಾನ ನೀಡಬೇಕು ಎಂದು ಅವರು ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News