ಗುಂಡೇಟು ಪ್ರಕರಣ; ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕು

Update: 2018-05-22 13:07 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 22: ಕಾರು ಢಿಕ್ಕಿ ಹೊಡೆದ ನಂತರ ನಡೆದ ಜಗಳ ವಿಕೋಪಕ್ಕೆ ತಿರುಗಿ ಸೋಫಾ ಅಂಗಡಿ ಮಾಲಕನ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ದುಷ್ಕರ್ಮಿಯ ಪತ್ತೆಗಾಗಿ ಪುಲಕೇಶಿನಗರ ಠಾಣಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಘಟನೆಯಲ್ಲಿ ಗಾಯವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫ್ರೇಜರ್ ಟೌನ್‌ನ ಮಸೂದ್ ಅಲಿ(40) ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಪುಲಿಕೇಶಿನಗರದಲ್ಲಿ ಸೋಮವಾರ ಮಧ್ಯಾಹ್ನ ಮಸೂದ್ ಅಲಿ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಮತ್ತೊಂದು ಕಾರು ಢಿಕ್ಕಿ ಹೊಡೆದಿದೆ. ಆಗ ಮಸೂದ್ ಅಲಿ ಕಾರಿನಿಂದ ಕೆಳಗಿಳಿದು ಢಿಕ್ಕಿ ಹೊಡೆದವರ ಜತೆ ಜಗಳಕ್ಕೆ ನಿಂತಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ದುಷ್ಕರ್ಮಿಯೊಬ್ಬ ಪಿಸ್ತೂಲ್‌ನಿಂದ ಮಸೂದ್ ಅಲಿ ಬೆನ್ನಿಗೆ ಗುಂಡಿಕ್ಕಿದ್ದಾನೆ ಎನ್ನಲಾಗಿದೆ.

ಪಿಸ್ತೂಲಿನಿಂದ ಶಬ್ದ ಬರುತ್ತಿದ್ದಂತೆಯೇ, ಜನ ಸೇರಿದ ತಕ್ಷಣ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಧಾವಿಸಿದ ಪುಲಿಕೇಶಿನಗರ ಪೊಲೀಸರು ಗುಂಡಿಕ್ಕಿ ಪರಾರಿಯಾದ ದುಷ್ಕರ್ಮಿಗಳ ಕಾರು ಸಿಸಿಟಿಯಲ್ಲಿ ಸೆರೆಯಾಗಿರುವುದನ್ನು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೃತ್ಯವೆಸಗಿದ ದುಷ್ಕರ್ಮಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಕೆಎ 51, ಪಿ-9826 ಸಂಖ್ಯೆಯ ಕಾರಿನಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಅಸಲಿಗೆ ಈ ನಂಬರ್ ರಿಜಿಸ್ಟ್ರೇಷನ್ ಹೊಂದಿರುವ ಕಾರು ಮಾರುತಿ ಕಂಪೆನಿಯ ಕಾರಾಗಿದ್ದು, ದುಷ್ಕರ್ಮಿಗಳು ಕಾರಿನ ಸಂಖ್ಯಾಫಲಕ ಬದಲಿಸಿರುವ ಸಾಧ್ಯತೆ ಇದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News