×
Ad

ಬೆಂಗಳೂರು: ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮಾವು ಮೇಳಕ್ಕೆ ಚಾಲನೆ

Update: 2018-05-22 18:43 IST

ಬೆಂಗಳೂರು, ಮೇ 22: ನಗರದ ನಿವಾಸಿಗಳಿಗೆ ಮಾವು ಹಾಗೂ ಹಲಸಿನ ಹಣ್ಣುಗಳ ಸವಿ ಉಣಿಸಲು ನಗರದ ಹಡ್ಸನ್ ವೃತ್ತದ ಹಾಪ್ ಕಾಮ್ಸ್ ಶೀತಲ ಗೃಹದ ಆವರಣದಲ್ಲಿ ಮಾವು ಮಾರಾಟ ಮೇಳಕ್ಕೆ ಚಾಲನೆ ನೀಡಲಾಗಿದೆ.

ನಗರ ವ್ಯಾಪ್ತಿಯ 250ಕ್ಕೂ ಅಧಿಕ ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಒಂದು ತಿಂಗಳ ಕಾಲ ಮಾವು ಹಾಗೂ ಹಲಸಿನ ಮೇಳ ನಡೆಯಲಿದೆ. ಹನ್ನೆರಡಕ್ಕೂ ಹೆಚ್ಚಿನ ಬಗೆಯ ಮಾವಿನ ಹಣ್ಣು ಹಾಗೂ ಹಲಸಿನ ಹಣ್ಣುಗಳು ಮೇಳದಲ್ಲಿ ದೊರೆಯುತ್ತವೆ. ಈ ಬಾರಿಯ ಮೇಳದಲ್ಲಿ ಸುಮಾರು 1 ಸಾವಿರ ಮೆಟ್ರಿಕ್‌ಟನ್ ಮಾವು ಹಾಗೂ ಹಲಸಿನ ಹಣ್ಣು ವ್ಯಾಪಾರ ನಡೆಸುವ ಗುರಿಯನ್ನು ಹಾಪ್ ಕಾಮ್ಸ್ ಹೊಂದಿದೆ ಎಂದು ತೋಟಗಾರಿಕೆ ನಿರ್ದೇಶಕ ವೈ.ಎಸ್.ಪಾಟೀಲ್ ತಿಳಿಸಿದರು.

ಮಾವು ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ತೋಟಗಳಿಂದ ನೇರವಾಗಿ ಮಾವು ಹಾಗೂ ಹಲಸು ಖರೀದಿಸಿ ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಮಾರಾಟವಾಗುತ್ತದೆ. ರೈತರ ಫಸಲಿಗೆ ಉತ್ತಮ ಬೆಲೆ ನೀಡುವುದರ ಜತೆಗೆ ಕಾರ್ಬೈಡ್ ಮಿಶ್ರಿತ ಹಣ್ಣುಗಳು ಮಾರುಕಟ್ಟೆಗೆ ಬರದಂತೆ ಎಚ್ಚರ ವಹಿಸಲಾಗುತ್ತದೆ ಎಂದು ತಿಳಿಸಿದರು.

ಈ ಬಾರಿಯ ಮಾವಿನ ಮೇಳದಲ್ಲಿ ಬಾದಾಮಿ, ಸೆಂದೂರ, ರಸಪುರಿ, ಮಲಗೋವ, ಮಲ್ಲಿಕಾ, ಬೈಗಾನ್ ಪಲ್ಲಿ, ಕಾಲಾಪಾಡು, ಕೇಸರ್, ನೀಲಂ, ದಶೇರಿ, ತೋತಾಪುರಿ ಹಾಗೂ ಸಕ್ರೆಗುತ್ತಿ ಮಾವಿನ ಹಣ್ಣು ಸಿಗುತ್ತಿದೆ. ಗ್ರಾಹಕರ ಆರೋಗ್ಯ ರಕ್ಷಿಸುವ ದೃಷ್ಟಿಯಿಂದ ಕಡ್ಡಾಯವಾಗಿ ಕಾರ್ಬೈಡ್ ರಹಿತವಾದ ಮಾವುಗಳನ್ನು ಮಾತ್ರ ಮಾರಲಾಗುತ್ತಿದೆ. ಇದಲ್ಲದೇ ಹಣ್ಣುಗಳನ್ನು ಒಯ್ಯಲು ಸಹಾಯವಾಗುವ ನಿಟ್ಟಿನಲ್ಲಿ 3 ಮತ್ತು 5 ಕೆಜಿಗಳ ಬಾಕ್ಸ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ವಿಶೇಷ ಸಂಚಾರಿ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಈ ಬಾರಿಯ ಮಾವು ಹಾಗೂ ಹಲಸಿನ ಹಣ್ಣಿನ ಋತು ಮುಗಿಯವವರೆಗೂ ಮೇಳ ಮುಂದುವರೆಯಲಿದೆ. ಜತೆಗೆ ಪ್ರತಿ ದಿನವೂ ಎಲ್ಲ ಹಣ್ಣುಗಳ ದರಪಟ್ಟಿಯನ್ನು ಮಳಿಗೆಯ ಎದುರು ಪ್ರದರ್ಶಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಹಾಪ್‌ಕಾಮ್ಸ್ ಅಧ್ಯಕ್ಷ ಎ.ಎಸ್.ಚಂದ್ರೇಗೌಡ, 'ರೈತರಿಂದ ಬರುವ ಎಲ್ಲ ತೋಟೋತ್ಪನ್ನಗಳನ್ನು ನಿಖರವಾದ ತೂಕ ಹಾಗೂ ನ್ಯಾಯ ಸಮ್ಮತ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಎಲ್ಲ ಬೃಹತ್ ಕಾರ್ಖಾನೆಗಳು, ಸಂಘ ಸಂಸ್ಥೆಗಳು ಸೇರಿದಂತೆ ಮುಂತಾದ ಸಭೆ ಸಮಾರಂಭಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಉಚಿತ ಸಾಗಾಣಿಕೆಯೊಂದಿಗೆ ಹಣ್ಣು, ತರಕಾರಿಗಳನ್ನು ಸರಬರಾಜು ಮಾಡಲಾಗುತ್ತಿದೆ, ಹಾಪ್ ಕಾಮ್ಸ್ ವಾರ್ಷಿಕ 100 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತಿದೆ ಎಂದು ಅವರು ವಿವರಿಸಿದರು. ಮಾರಾಟ ಮೇಳ ಚಾಲನೆ ವೇಳೆ ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ವಿಶ್ವನಾಥ್, ಉಪಾಧ್ಯಕ್ಷ ಬಿ.ಮುನೇಗೌಡ ಸೇರಿ ಪ್ರಮುಖರು ಉಪಸ್ಥಿತರಿದ್ದರು.

ಮಾವಿನ ತಳಿಗಳ ದರಗಳು: ಮಾವು ನಾಟಿ-40ರೂ., ತೋತಾಪುರಿ ಮಾವಿನಕಾಯಿ-30ರೂ., ಮಾವು ಸೆಂದೂರ-50ರೂ., ಮಾವು ರಸಪುರಿ-65ರೂ., ಮಾವು ಬೈಗಾನ್‌ಪಲ್ಲಿ-60ರೂ., ಮಾವು ಕಲಾಪಾಡು-95ರೂ., ಮಾವು ಮಲ್ಲಿಕಾ-88ರೂ., ಮಾವು ಬಾದಾಮಿ-78ರೂ, ಮಾವು ದಸೇರಿ-115ರೂ., ಮಾವು ಮಲಗೋವ-125ರೂ., ಮಾವು ಸಕ್ಕರೆಗುತ್ತಿ-100ರೂ., ಮಾವು ಅಮರ್‌ಪಲ್ಲಿ-75ರೂ. ಹಾಗೂ ಹಲಸಿನ ಹಣ್ಣು-20ರೂ. ಪ್ರತಿ ಕೆ.ಜಿ.ಗೆ.

ಕೇರಳದಲ್ಲಿ ಕಾಣಿಸಿಕೊಂಡಿರುವ ನಿಪಾಹ್ ವೈರಸ್ ಕರ್ನಾಟಕದಲ್ಲಿ ಇಲ್ಲ. ಇಲ್ಲಿಯ ಯಾವ ಹಣ್ಣುಗಳು ನಿಪಾಹ್ ಸೇರಿದಂತೆ ಯಾವ ವೈರಸ್‌ಗೂ ತುತ್ತಾಗಿಲ್ಲ. ಈ ಬಗ್ಗೆ ಆತಂಕ ಪಡುವ ಆತಂಕವಿಲ್ಲ. ಮಾವಿನ ಹಣ್ಣುಗಳನ್ನು ಮನಸೋಯಿಚ್ಛೆ ತಿನ್ನಬಹುದಾಗಿದೆ.
-ವೈ.ಎಸ್.ಪಾಟೀಲ್, ನಿರ್ದೇಶಕಿ, ತೋಟಗಾರಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News