ನಿಪ್ಹಾ ವೈರಸ್ ಭೀತಿ: ಇವುಗಳ ಬಗ್ಗೆ ನಿಮಗೆ ನಿಗಾ ಇರಲಿ

Update: 2018-05-22 14:13 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 22: ಯಾವುದೆ ರೀತಿಯ ಜ್ವರ ಕಂಡು ಬಂದಲ್ಲಿ ಉದಾಸೀನ ಮಾಡದೆ ಹಾಗೂ ನಿಪ್ಹಾ ವೈರಸ್ ಲಕ್ಷಣಗಳಿರುವ ಜ್ವರ ಕಂಡು ಬಂದಲ್ಲಿ ತಕ್ಷಣ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ಆರೋಗ್ಯ ಮತ್ತು ತುರ್ತು ಸೇವೆಗಳ ಸಹ ನಿರ್ದೇಶಕರು ಸಲಹೆ ಮಾಡಿದ್ದಾರೆ.

ಕೇರಳದಲ್ಲಿ ನಿಪ್ಹಾ ವೈರಸ್‌ನಿಂದ ಹಲವು ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಈ ಮಾರಕ ರೋಗ ರಾಜ್ಯಕ್ಕೆ ಬರದಂತೆ ತಡೆಯಲು ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯದ ಜನತೆ ಜ್ವರ ಹಾಗೂ ನಿಪ್ಹಾ ವೈರಸ್ ಲಕ್ಷಣಗಳು ಕಂಡು ಬಂದ ಕೂಡಲೆ ವೈದ್ಯರನ್ನು ಭೇಟಿ ಆಗಬೇಕೆಂದು ಮನವಿ ಮಾಡಿದೆ.

ನಿಗಾ ವಹಿಸಬೇಕಾದ ಕ್ರಮಗಳು: ರೋಗಿಗಳೊಂದಿಗೆ ಕಾರ್ಯನಿರ್ವಹಿಸುವ ಸಿಬ್ಬಂದಿ ಮಾಸ್ಕ್, ಕೈಕವಚ ಧರಿಸುವುದು ಹಾಗೂ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಗಮನ ವಹಿಸುವುದು.
-ಯಾವುದೆ ಪ್ರಾಣಿ ಪಕ್ಷಿಗಳು ಕಚ್ಚಿದ ಹಾಗೂ ಮಳೆಗಾಳಿಯಿಂದ ಬಿದ್ದಿರುವ ಹಣ್ಣುಗಳನ್ನು ಸೇವಿಸಬಾರದು.
-ಬೀದಿ ಬದಿಗಳಲ್ಲಿ ಕತ್ತರಿಸಿ ಮಾರುವ ಹಣ್ಣು ಹಂಪಲುಗಳನ್ನು ಸೇವಿಸಬಾರದು.
-ನೀರಾ ಇಳಿಸುವವರು ವೈಯಕ್ತಿಕ ಸ್ವಚ್ಛತೆ ಕಾಪಾಡುವುದು ಹಾಗೂ ಸರಿಯಾಗಿ ಕೈ ಕಾಲುಗಳನ್ನು ಸೋಪಿನಿಂದ ತೊಳೆಯುವುದು.
-ಶುಚಿಗೊಳಿಸದ ಕೈಗಳಿಂದ ಕಣ್ಣು ಮತ್ತು ಮೂಗುಗಳನ್ನು ಉಜ್ಜಬಾರದು.
-ಕಚ್ಚಾ ಖರ್ಜೂರಗಳನ್ನು ಸೇವಿಸದಿರುವುದು.
-ಸಂಸ್ಕರಿಸಿಲ್ಲದ ಯಾವುದೇ ಡ್ರೈ ಫ್ರೂಟ್‌ಗಳನ್ನು ಉಪಯೋಗಿಸದಿರುವುದು.
-ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಯಾವುದೆ ರೀತಿಯ ಗಾಯ ಅಥವಾ ಸೋಂಕಿಗೆ ಒಳಗಾಗಿದ್ದಲ್ಲಿ ಸೂಕ್ತ ಚಿಕಿತ್ಸೆಗೆ ಒಳಪಡುವುದು.
-ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿರುವ ತೆರೆದ ಬಾವಿಯ ನೀರನ್ನು ಶುದ್ಧೀಕರಿಸಿ ಸೇವಿಸುವುದು ಹಾಗೂ ಬಾವಿಗಳನ್ನು ಬಲೆಗಳಿಂದ ಮುಚ್ಚಿ ಬಾವಲಿಗಳು ಒಳ ಪ್ರವೇಶಿಸದಂತೆ ನೋಡಿಕೊಳ್ಳುವುದು.

ನಿಪ್ಹಾ ವೈರಸ್‌ನ ಲಕ್ಷಣಗಳು: ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ. ಪ್ರಜ್ಞಾಹೀನತೆಗೆ ಒಳಗಾಗುವುದು. ಅತಿಯಾದ ಜ್ವರ ಮೆದುಳಿಗೆ ವ್ಯಾಪಿಸುವುದು. ಮಾತುಗಳಲ್ಲಿ ತೊದಲುವಿಕೆ ಹಾಗೂ ಅಪಸ್ಮಾರದ ಲಕ್ಷಣಗಳು ಕಾಣಿಸಿಕೊಳ್ಳುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News