ಎಚ್‌ಡಿಕೆ ಐದು ವರ್ಷ ಸಿಎಂ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್

Update: 2018-05-22 14:16 GMT

ಬೆಂಗಳೂರು, ಮೇ 22: ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ರಚನೆಯಾಗಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವನ್ನು ಯಶಸ್ವಿಗೊಳಿಸುವುದು ನಮ್ಮ ಮುಂದಿರುವ ಗುರಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿರಬೇಕೆಂಬ ವಿಚಾರದ ಕುರಿತು ಈವರೆಗೆ ಯಾವುದೆ ಚರ್ಚೆಯನ್ನು ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಕ್ತಾಯಗೊಂಡ ನಂತರ ಈ ಬಗ್ಗೆ ಉಭಯ ಪಕ್ಷದ ಮುಖಂಡರು ಕೂತು ಚರ್ಚೆ ಮಾಡುತ್ತೇವೆ. ಸಮ್ಮಿಶ್ರ ಸರಕಾರದಲ್ಲಿ ಕೊಡು-ಕೊಳ್ಳುವಿಕೆ ಇರಬೇಕು. ನಾವು ಹಾಗೇ ಇರಬೇಕು, ಅವರು ಹಾಗೇ ಇರಬೇಕು ಎಂದು ಪರಮೇಶ್ವರ್ ಹೇಳಿದರು.

ಸಚಿವ ಸ್ಥಾನ ಯಾರಿಗೆ ನೀಡಬೇಕೆಂಬ ಕುರಿತು ಚರ್ಚೆ ನಡೆಸಿಲ್ಲ. ಉಪ ಮುಖ್ಯಮಂತ್ರಿ ಸ್ಥಾನವನ್ನು ಯಾರಿಗೆ ನೀಡಬೇಕೆಂದು ಹಿರಿತನ, ಸಾಮರ್ಥ್ಯದ ಆಧಾರದ ಮೇಲೆ ತೀರ್ಮಾನಿಸಲಾಗುವುದು. ನಾಳೆಯೊಳಗೆ ಉಪ ಮುಖ್ಯಮಂತ್ರಿ ಸ್ಥಾನ ಘೋಷಣೆಯಾಗಬಹುದು ಎಂದು ಅವರು ಹೇಳಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲೇ ಕಾಂಗ್ರೆಸ್ ಪಕ್ಷದ ಕೆಲವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ಪರಮೇಶ್ವರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News