ದ.ಕ.ದಲ್ಲಿ ನಿಪ್ಹಾ ವೈರಸ್ ಪತ್ತೆಯಾಗಿಲ್ಲ; ಆತಂಕ ಬೇಡ, ಎಚ್ಚರವಿರಲಿ: ಯು.ಟಿ.ಖಾದರ್

Update: 2018-05-22 14:41 GMT

ಬೆಂಗಳೂರು,ಮೇ 22: ದ.ಕ.ಜಿಲ್ಲೆಯಲ್ಲಿ ಈ ತನಕ ನಿಪ್ಹಾ ವೈರಸ್ ರೋಗಿಗಳ ಪತ್ತೆ ಆಗಿಲ್ಲ. ಸಂಶಯದ ದೃಷ್ಟಿಯಲ್ಲಿ ಇಬ್ಬರ ರಕ್ತ ಪರೀಕ್ಷೆಗೆ ಕಳುಹಿಸಲಾಗಿದೆ. ಆದ್ದರಿಂದ ಈ ಬಗ್ಗೆ ಆತಂಕ ಬೇಡ. ಎಚ್ಚರ, ಜಾಗೃತಿ ಇರಲಿ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಬೆಂಗಳೂರಿನ ಹಿಲ್ಟನ್ ಹೋಟೆಲ್ ನಿಂದ ದ.ಕ.ಜಿಲ್ಲಾ ವೈದ್ಯಾಧಿಕಾರಿಗಳ ಜೊತೆ ಈ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗಿದ್ದು, ಜ್ವರ, ತಲೆನೋವು, ನಿತ್ರಾಣ, ವಾಂತಿ ಮೊದಲಾದವು ಕಂಡುಬಂದರೆ ತಡಮಾಡದೆ ತಕ್ಷಣ ವೈದ್ಯರನ್ನು ಕಂಡು ಸೂಕ್ತಚಿಕಿತ್ಸೆ ಪಡೆಯಬೇಕು ಎಂದು ಸಾರ್ವಜನಿಕರಿಗೆ ಯು.ಟಿ.ಖಾದರ್ ವಿನಂತಿಸಿದ್ದಾರೆ.

ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಕೇರಳ ಮೂಲದವರು ಹೆಚ್ಚಾಗಿ ಸಂಪರ್ಕಿಸುವುದರಿಂದ ರೈಲ್ವೇ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಸೆಂಟರ್ ಸ್ಥಾಪಿಸಲು ಆರೋಗ್ಯಾಧಿಕಾರಿಯವರಿಗೆ ಯು.ಟಿ.ಖಾದರ್ ಸೂಚಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ, ಸಮಾರಂಭಗಳಲ್ಲಿ ಮುಖಕ್ಕೆ ಮಾಸ್ಕ್ ಬಳಸುವುದು ಉತ್ತಮ. ಹೊರಗೆ ಹೋದರೆ ಬಿಸಿನೀರು ಉಪಯೋಗ, ಪುನಃ ಮನೆ ಸೇರಿದಾಗ ಸಾಬೂನಿನಿಂದ ಕೈ ಮುಖ ತೊಳೆಯುವುದು, ತರಕಾರಿ - ಹಣ್ಣುಹಂಪಲುಗಳನ್ನು ಚೆನ್ನಾಗಿ ತೊಳೆದು ತಿನ್ನುವುದು, ತರಕಾರಿ, ಮಾಂಸಾಹಾರಗಳನ್ನು ಚೆನ್ನಾಗಿ ಬೇಯಿಸಿ ತಿನ್ನುವುದು, ಉಪವಾಸಿಗರು ಕಚ್ಚಾ ಖರ್ಜೂರವನ್ನು ನೀರಿನಲ್ಲಿ ತೊಳೆದು ತಿನ್ನುವುದು, ರೋಗ ಲಕ್ಷಣ ಕಂಡುಬಂದರೆ ಶೀಘ್ರವೇ ಚಿಕಿತ್ಸೆ ಪಡೆಯುವುದು ಮೊದಲಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸಾರ್ವಜನಿಕರಿಗೆ ಮಂಗಳೂರು ಶಾಸಕರಾದ ಯು.ಟಿ.ಖಾದರ್ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News