ಆರ್ಥಿಕ ಭದ್ರತೆ ಇಲ್ಲದ ಇಳಿವಯಸ್ಕರ ಪಾಡೇನು?

Update: 2018-05-22 18:32 GMT

ಮಾನ್ಯರೇ,

ಹೆತ್ತವರನ್ನು ಕಡೆಗಣಿಸಿದವರಿಗೆ ಸರಕಾರ ಶಿಕ್ಷೆಯನ್ನು ವಿಸ್ತರಿಸಬೇಕಾಗಿ ಬಂದಿರುವುದು ಇಡೀ ದೇಶಕ್ಕೆ ನಾಚಿಗೇಡಿನ ಸಂಗತಿ. ಇದು ಮಕ್ಕಳಿರುವ ವೃದ್ಧರಿಗೆ ಒದಗಿಸಬಹುದಾದ ಪರಿಹಾರ(?) ಆದರೆ ಮಕ್ಕಳಿಲ್ಲದ ಮುಖ್ಯವಾಗಿ ಅವಿವಾಹಿತರಾಗಿಯೇ ಉಳಿದು ಹೋಗಿರುವ ಆರ್ಥಿಕ ಭದ್ರತೆ ಇಲ್ಲದ ಇಳಿವಯಸ್ಕರ ಪಾಡೇನು? ಈ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ.

ಮಕ್ಕಳಾಗದ ದಂಪತಿ ಶ್ರೀಮಂತರಾಗಿದ್ದಲ್ಲಿ ಸುಲಭವಾಗಿ ಅನಾಥ ಮಗುವನ್ನು ದತ್ತು ಪಡೆಯಬಹುದು. ಸುಷ್ಮಿತಾ ಸೇನ್, ಶೋಭನಾರಂತಹ ಹೇರಳ ಹಣ, ಹೆಸರು ಇರುವ ಅವಿವಾಹಿತೆಯರು ಮಕ್ಕಳನ್ನು ದತ್ತು ಪಡೆದಿದ್ದಾರೆ. ಆದರೆ ಓರ್ವ ನರ್ಸ್, ಖಾಸಗಿ ಶಾಲೆಯ ಟೀಚರ್ ಆಗಿದ್ದಲ್ಲಿ ಮಗುವನ್ನು ದತ್ತು ಪಡೆಯುವುದು ನಾಲ್ಕು ಮಕ್ಕಳನ್ನು ಹೆತ್ತು ಹೊತ್ತು ಸಾಕುವುದಕ್ಕಿಂತ ಕಷ್ಟ. ಈಗೀಗ ನಿಬಂಧನೆಗಳನ್ನು ಸಡಿಲಿಸಲಾಗಿದೆಯಂತೆ. ಹಾಗಿದ್ದೂ ಕ್ರೆಡಿಟ್‌ಕಾರ್ಡ್ ಇರುವವರಿಗೆ ಮಾತ್ರ ಮಕ್ಕಳನ್ನು ದತ್ತು ಪಡೆಯಲು ಅವಕಾಶವಿದೆ ಎಂದು ಓದಿದ ನೆನಪು.

ನೈತಿಕತೆಗಿಂತ ಹಣವೇ ಮುಖ್ಯವಾಗಿದೆ. ಎಪ್ಪತ್ತು ಎಂಬತ್ತರ ದಶಕಗಳಲ್ಲಿ ನಿರುದ್ಯೋಗ, ಲಂಚಾವತಾರಗಳು ತೀವ್ರ ಸ್ವರೂಪದಲ್ಲಿ ಇದ್ದವು. ಇನ್ನು ಹೆಣ್ಣುಮಕ್ಕಳ ಮಟ್ಟಿಗೆ ಮೇಲ್ಜಾತಿ ಹಿಂದೂಗಳಾಗಿ ಹುಟ್ಟುವುದು ಶಾಪವೇ ಹೊರತು ವರವಲ್ಲ. ಆಗಂತೂ ಶೇಕಡಾ ಎಂಬತ್ತು ವಿದ್ಯಾವಂತ ಯುವತಿಯರು ಟೀಚರ್ ಮತ್ತು ಬ್ಯಾಂಕ್ ನೌಕರಿಗಳಿಗೆ ಮುಗಿಬೀಳುತ್ತಿದ್ದರು. ಹಾಗಾಗಿ ಹಲವರ ಬದುಕು ಟ್ಯೂಷನ್, ಖಾಸಗಿ ಶಾಲೆಗಳಲ್ಲಿ ಅತಂತ್ರವಾಗಿ ಕಳೆದುಹೋಯಿತು. ಮದುವೆಯಾಗಲು ಜಾತಿ, ಉಪಜಾತಿ, ಜಾತಕ, ನಕ್ಷತ್ರ, ಗ್ರಹ ಎಂದು ಜ್ಯೋತಿಷಿಗಳ ಪೀಡೆ ಒಂದು ಕಡೆಯಾದರೆ, ಇನ್ನೊಂದು ಕಡೆ ವರದಕ್ಷಿಣೆ, ವರೋಪಚಾರ, ಅಚ್ಚುಕಟ್ಟಾದ ಮದುವೆ ಎಂದು ಬೀಗರಾಗುವವರು ಮದುವೆಗಳಿಗೆ ಕಲ್ಲು ಹಾಕುತ್ತಿದ್ದರು. ಇಳಿ ವಯಸ್ಸಿನ ಅನುಕೂಲಸ್ಥರಲ್ಲದ ಸ್ತ್ರೀಯರಾಗಲಿ, ಪುರುಷರಾಗಲಿ ಒಂಟಿಯಾಗಿರುವುದು ಬಹಳ ಕಷ್ಟ. ಮುಖ್ಯ ಅನಾರೋಗ್ಯ ಸಮಸ್ಯೆಗಳಾದಾಗ ಪಾಪಿ ಪರದೇಶಿಗಳಂತೆ ಸಾಯಬೇಕಾಗುತ್ತದೆ. ಸರಕಾರ, ಸಂಘಸಂಸ್ಥೆಗಳು ಅವರಿಗೆ ವೃದ್ಧಾಶ್ರಮಗಳಲ್ಲಿ ಆದ್ಯತೆ ನೀಡಬೇಕು. ದುಬಾರಿ ಚಿಕಿತ್ಸೆಗಳು ಕೈಗೆಟಕುವ ವ್ಯವಸ್ಥೆ ಆಗಬೇಕು. ಆಶ್ರಯ ಮನೆಗಳಂತೆ ಶೌಚಾಲಯವಿರುವ ಒಂದು ಕೊಠಡಿಯನ್ನಾದರೂ ಇಂಥ ಒಬ್ಬಂಟಿಗರಿಗೆ ಒಂದೇ ಕಡೆ ನಿರ್ಮಿಸಿಕೊಟ್ಟರೆ ಎಷ್ಟೋ ಮೇಲು.
ಯೌವನ, ಮಧ್ಯವಯಸ್ಸು ಮುಪ್ಪುಎಲ್ಲವೂ ಸಮಸ್ಯೆಗಳಾದಲ್ಲಿ ದೇಶ ಉದ್ಧಾರವಾಗುವುದೆಂದು?

Writer - -ಕಸ್ತೂರಿ, ತುಮಕೂರು

contributor

Editor - -ಕಸ್ತೂರಿ, ತುಮಕೂರು

contributor

Similar News