ಕನ್ನಡ ಪರ ಸಂಘಟನೆಗಳ ರಾಜಕೀಯ!

Update: 2018-05-22 18:33 GMT

ಮಾನ್ಯರೇ,

ಇತ್ತೀಚೆಗೆ ರಾಜ್ಯದಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಹಲವು ಕನ್ನಡ ಪರ ಸಂಘಟನೆಗಳು ಒಂದೊಂದು ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡು ಬಹಿರಂಗವಾಗಿ ರಾಜಕೀಯ ಪ್ರಚಾರ ಮಾಡಿರುವುದು ಸಮರ್ಥನೀಯವಲ್ಲ. ಕನ್ನಡ ನಾಡು ನುಡಿ ನೆಲ ಜಲ ಸಂರಕ್ಷಣೆ ಮಾಡುವ ಧ್ಯೇಯದೊಂದಿಗೆ ರಾಜ್ಯದ ಮೂಲೆಮೂಲೆಗಳಲ್ಲಿ ನೂರಾರು ಕನ್ನಡ ಪರ ಸಂಘಟನೆಗಳು ಉದಯವಾಗಿವೆ. ಇನ್ನೂ ಉದಯಿಸುತ್ತಲೂ ಇವೆ. ಆದರೆ ಈ ಕನ್ನಡ ಪರ ಸಂಘಟನೆಗಳಿಂದ ನಿಜವಾಗಿ ಕನ್ನಡದ ಸಂರಕ್ಷಣೆಯಾಗುತ್ತಿದೆಯೇ? ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಒಳಗೊಂಡಂತೆ ಇತರ ಗಡಿ ಪ್ರದೇಶಗಳಲ್ಲಿ ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದ ಮತ್ತು ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಕನ್ನಡ ಸಂಸ್ಕೃತಿ ಹಾಗೂ ಭಾಷೆ ಅವನತಿಯತ್ತ ಸಾಗುತ್ತಿದೆ. ಕನ್ನಡದಲ್ಲಿ ಕಲಿತವರಿಗೆ ಉದ್ಯೋಗ ಸಿಗುತ್ತಿಲ್ಲ. ಕನ್ನಡ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿವೆ. ಕಾವೇರಿ ಮತ್ತು ಮಹಾದಾಯಿ ನದಿ ನೀರಿನ ಸಮಸ್ಯೆ ಬಗೆಹರಿಯುತ್ತಿಲ್ಲ. ಹೀಗೆ ರಾಜ್ಯದಲ್ಲಿ ಹತ್ತು ಹಲವು ಜ್ವಲಂತ ಸಮಸ್ಯೆಗಳು ಇದ್ದರೂ ಈ ಕನ್ನಡ ಪರ ಸಂಘಟನೆಗಳು ಇಲ್ಲಿಯವರೆಗೂ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸಫಲವಾಗಿವೆಯೇ?.

ರಾಜ್ಯದ ಬಡ ಜನತೆಗೆ ಸರಕಾರ ಅಥವಾ ಜನಪ್ರತಿಧಿಗಳಿಂದ ಅನ್ಯಾಯವಾದಾಗ ಇವರ ವಿರುದ್ಧ ಪ್ರತಿಭಟಿಸಿ ನ್ಯಾಯ ಒದಗಿಸಬೇಕಾದ ಹಲವು ಕನ್ನಡ ಪರ ಸಂಘಟನೆಗಳು ಕೆಲವು ತಿಂಗಳಿಂದ ರಾಜಕೀಯ ಪಕ್ಷಗಳಲ್ಲಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದಾಗ ಇವುಗಳೂ ರಾಜಕೀಯ ಪಕ್ಷಗಳಿಗಿಂತ ಹೊರತಲ್ಲವೆನಿಸುತ್ತಿದೆ.

Writer - -ಮೌಲಾಲಿ ಕೆ ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ ಬೋರಗಿ, ಸಿಂದಗಿ

contributor

Similar News