ಕುಮಾರಸ್ವಾಮಿಯವರು ಸಿದ್ದರಾಮಯ್ಯರ ಸಲಹೆ ಪಡೆದುಕೊಳ್ಳಲಿ: ದೇವೇಗೌಡ

Update: 2018-05-23 10:15 GMT

ಬೆಂಗಳೂರು, ಮೇ 23: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಲಿರುವ ಕುಮಾರಸ್ವಾಮಿಯವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆ ಪಡೆದುಕೊಳ್ಳಲಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನೀಡಿದ್ದಾರೆ.

ಇಲ್ಲಿನ ಪದ್ಮನಾಭ ನಗರದ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ತಲೆದೋರದಂತೆ ನೋಡಿಕೊಳ್ಳುವುದಕ್ಕಾಗಿ ಸಮನ್ವಯ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ. ಕುಮಾರಸ್ವಾಮಿಯು ಅವರೊಂದಿಗೆ ಚರ್ಚಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಲಿ ಎಂದು ಹೇಳಿದರು.

ರೈತರ ಸಾಲಮನ್ನಾ ವಿಚಾರ ಸಮನ್ವಯ ಸಮಿತಿಯಲ್ಲಿ ಚರ್ಚಿಸಿದ ಬಳಿಕವಷ್ಟೇ ತೀರ್ಮಾನಿಸಲು ಸಾಧ್ಯ ಎಂದು ದೇವೇಗೌಡ ನುಡಿದರು.

ಮುಖ್ಯಮಂತ್ರಿಯಾಗಲಿರುವ ಕುಮಾರಸ್ವಾಮಿಗೆ ನಾನು ಪಕ್ಷದ ಅಧ್ಯಕ್ಷ ಅನ್ನೋದಕ್ಕಿಂತ ಹೆಚ್ಚಾಗಿ ತಂದೆಯಾಗಿ ಆಶೀರ್ವಾದ ಮಾಡುತ್ತಿದ್ದೇನೆ. ಇದು ತಂದೆ ತಾಯಿಗಳಾದ ನಮ್ಮ ಕರ್ತವ್ಯ ಎಂದು ಅವರು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತೃತೀಯ ರಂಗ ರಚನೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ದೇವೇಗೌಡ, ವಿವಿಧ ರಾಜ್ಯಗಳಿಂದ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರು ಬಂದಿದ್ದಾರೆ. ಆದರೆ ತೃತೀಯ ರಂಗದ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News