ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಪ್ರಮಾಣವಚನ

Update: 2018-05-23 14:45 GMT

ಬೆಂಗಳೂರು, ಮೇ 23: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿಯವರು ದೇವರು ಮತ್ತು ಕನ್ನಡ ನಾಡಿನ ಜನತೆಯ ಹೆಸರಿನಲ್ಲಿ ಬುಧವಾರ ಸಂಜೆ ವಿದ್ಯುಕ್ತವಾಗಿ ಪ್ರಮಾಣ ವಚನ ಸ್ವೀಕರಿಸಿದರು

ಬುಧವಾರ ವಿಧಾನಸೌಧದ ಪೂರ್ವ ದ್ವಾರದಲ್ಲಿನ ವೈಭವಪೇತ ಮೆಟ್ಟಿಲುಗಳ ಮೇಲೆ ಏರ್ಪಡಿಸಿದ್ದ ಅದ್ದೂರಿ ಸಮಾರಂಭದಲ್ಲಿ ರಾಜ್ಯಪಾಲ ವಜೂಬಾಯಿ ವಾಲಾ, ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕರೂ ಆಗಿರುವ ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿ(ಡಿಸಿಎಂ)ಯಾಗಿ ದೇವರ ಹೆಸರಿನಲ್ಲಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದರು.

ಮಧ್ಯಾಹ್ನದಿಂದಲೇ ಸುರಿಯುತ್ತಿರುವ ಜಿಟಿಜಿಟಿ ಮಳೆಯ ಮಧ್ಯೆಯೇ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು, ಕುಮಾರಸ್ವಾಮಿ ಮತ್ತು ಡಾ.ಪರಮೇಶ್ವರ್ ಅವರ ಅಭಿಮಾನಿಗಳು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಕಣ್ತುಂಬಿಕೊಂಡರು.

ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಎಚ್.ಡಿ.ಕುಮಾರಸ್ವಾಮಿ, ಹಾಗೂ ಡಾ.ಜಿ.ಪರಮೇಶ್ವರ್ ಸೇರಿದಂತೆ ಉಭಯ ನಾಯಕರಿಗೆ ಪುಷ್ಪಗುಚ್ಚ ಹಾಗೂ ಹಸ್ತಲಾಘವ ನೀಡಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಅಭಿನಂದನೆ ಸಲ್ಲಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ನಂತರ ಎಚ್.ಡಿ.ಕುಮಾರಸ್ವಾಮಿ ಅವರು, ತಮ್ಮ ತಾಯಿ ಚೆನ್ನಮ್ಮ ಹಾಗೂ ತಂದೆ ದೇವೇಗೌಡರ ಪಾದಕ್ಕೆ ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡರು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ವಿವಿಧ ರಾಜ್ಯಗಳ ಸಿಎಂಗಳು ಸೇರಿದಂತೆ ಹಲವು ದಿಗ್ಗಜರು ಸಾಕ್ಷಿಯಾದರು.

ಜೆ.ಪಿ.ನಗರದಿಂದ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಜೊತೆ ಕಾರಿನಲ್ಲಿ ಸಂಜೆ 4:20ಕ್ಕೆ ವಿಧಾನಸೌಧದ ಮುಂಭಾಗದಲ್ಲಿನ ವೇದಿಕೆಗೆ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರರು ಹರ್ಷೋದ್ಘಾರದಿಂದ ಘೋಷಣೆ ಕೂಗಿದರು. ಈ ವೇಳೆ ಜನರತ್ತ ಕೈಬಿಸಿ, ನಮಸ್ಕರಿಸಿದರು.

ಇದೇ ವೇಳೆ ವೇದಿಕೆಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಪ್ರಧಾನಿ ದೇವೇಗೌಡ ಎದುರುಗೊಂಡು ಪರಸ್ಪರ ಮಾತನಾಡಿದರು. ಅಲ್ಲದೆ, ಜನರತ್ತ ಕೈಬಿಸಿ, ನಮಸ್ಕರಿಸಿದರು. ಅಲ್ಲದೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಪರಸ್ಪರ ಹಸ್ತಲಾಘವ ನೀಡಿ, ಆಲಂಗಿಸಿಕೊಂಡಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ನೂತನ ಸಿಎಂ ಆಗಿ ಎಚ್.ಡಿ. ಕುಮಾರಸ್ವಾಮಿ, ಡಿಸಿಎಂ ಆಗಿ ಡಾ.ಜಿ.ಪರಮೇಶ್ವರ್ ಅವರು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದಲ್ಲಿ ಸೃಷ್ಟಿಯಾಗಿದ್ದ ರಾಜಕೀಯ ಅನಿಶ್ಚಿತತೆ ತೆರೆ ಎಳೆದಂತೆ ಆಗಿದೆ.

ಸಿಹಿ ಹಂಚಿ ಸಂಭ್ರಮಾಚರಣೆ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ನೂತನ ಮುಖ್ಯಮಂತಿ, ಉಪ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ ಸಾವಿರಾರು ಜನ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಏಕಕಾಲಕ್ಕೆ ಮೊಬೈಲ್‌ಗಳ ಮೂಲಕ ಫೋಟೊ ಕ್ಲಿಕ್ಕಿಸಲು ಪ್ಲಾಶ್‌ಲೈಟ್ ಆನ್ ಮಾಡಿದ್ದು ವಿಶೇಷವಾಗಿತ್ತು.

ಪ್ರಮಾಣ ವಚನಕ್ಕೆ ಸಾಕ್ಷಿಯಾದ ದಿಗ್ಗಜರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಎಸ್ಪಿ ನಾಯಕಿ ಮಾಯಾವತಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. ಆಂಧ್ರಪ್ರದೇಶ ಸಿಎಂ ಚಂದ್ರಬಾಬುನಾಯ್ಡು, ಹೊಸದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪುದುಚೇರಿ ಸಿಎಂ ನಾರಾಯಣಸ್ವಾಮಿ, ಸಿಪಿಎಂ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐನ ಡಿ.ರಾಜಾ, ಆರ್‌ಜೆಡಿ ತೇಜಸ್ವಿ ಯಾದವ್, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಜೆಡಿಯು ಬಂಡಾಯ ನಾಯಕ ಶರದ್ ಯಾದವ್, ಕೇಂದ್ರದ ಮಾಜಿ ಸಚಿವ ಜೈಪಾಲ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.

ಬಿಜೆಪಿ ಗೈರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ನೂತನ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ಮುಖಂಡ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಕೇಂದ್ರ ಸರಕಾರದ ಪ್ರತಿನಿಧಿಗಳು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಯಾವೊಬ್ಬ ಬಿಜೆಪಿ ಮುಖಂಡರು ಪಾಲ್ಗೊಂಡಿರಲಿಲ್ಲ. ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಒಂದು ರೀತಿಯಲ್ಲಿ ಬಿಜೆಪಿ ವಿರುದ್ಧ ಶಕ್ತಿ ಪ್ರದರ್ಶನದಂತೆ ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News