ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್?

Update: 2018-05-23 13:07 GMT

ಬೆಂಗಳೂರು, ಮೇ 23: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಗೆ ಪ್ರಮುಖ ಕಾರಣಕರ್ತರಾದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಉಪ ಮುಖ್ಯಮಂತ್ರಿ ಹುದ್ದೆ ಕಲ್ಪಿಸದಿರುವ ಪಕ್ಷದ ನಾಯಕರ ವಿರುದ್ಧ ಡಿ.ಕೆ.ಸಹೋದರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿಯ ಆಪರೇಷನ್ ಕಮಲಕ್ಕೆ ಬಲಿಯಾಗದಂತೆ ಶಾಸಕರನ್ನು ಬೆಂಗಾವಲಾಗಿ ಹಗಲು ರಾತ್ರಿ ಎನ್ನದೆ ನಾವು ಕಾಯುತ್ತಿದ್ದೇವೆ. ಆದರೆ, ಅಧಿಕಾರ ಹಂಚಿಕೆ ಸಂದರ್ಭ ಬಂದಾಗ ನಮ್ಮನ್ನು ಕಡೆಗಣಿಸುತ್ತಿರುವುದೇಕೆ ಎಂದು ಸಂಸದ ಡಿ.ಕೆ.ಸುರೇಶ್ ನಿನ್ನೆ ರಾತ್ರಿಯೇ ಹಿಲ್ಟನ್ ಹೊಟೇಲ್‌ನಿಂದ ಹೊರ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಕೆಲಸ ಮಾಡೋಕೆ ನಾವು ಬೇಕು, ಅಧಿಕಾರ ಮಾತ್ರ ಬೇರೆಯವರಿಗಾ? ನಮಗೆ ಇನ್ನು ಮುಂದೆ ಯಾವ ಜವಾಬ್ದಾರಿಯನ್ನೂ ನೀಡಬೇಡಿ. ನೀವೆ ಏನಾದರೂ ಮಾಡಿಕೊಳ್ಳಿ ಎಂದು ಶಾಸಕರ ಸಮ್ಮುಖದಲ್ಲಿ ಪಕ್ಷದ ನಾಯಕರ ವಿರುದ್ಧವೇ ಸುರೇಶ್ ಆಕ್ರೋಶ ವ್ಯಕ್ತಪಡಿಸಿ ಹೊಟೇಲ್‌ನಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗಿದೆ.

ಸುರೇಶ್ ಅವರನ್ನು ಸಮಾಧಾನಪಡಿಸಲು ಎಐಸಿಸಿ ಕಾರ್ಯದರ್ಶಿ ಯಶೋಮತಿ ಠಾಕೂರ್ ಎಷ್ಟೇ ಪ್ರಯತ್ನಪಟ್ಟರೂ ಅದು ವಿಫಲವಾಯಿತು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಈ ಘಟನೆ ನಂತರ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್‌ರನ್ನು ಸಾಕಷ್ಟು ಬಾರಿ ಸಂಪರ್ಕಿಸಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ತಾಜ್‌ವೆಸ್ಟೆಂಡ್ ಹೊಟೇಲ್‌ನಲ್ಲಿ ನಿನ್ನೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರೊಂದಿಗೆ ನಡೆದ ಸಭೆಯ ಬಳಿಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಆದರೆ, ಮುಖ್ಯಮಂತ್ರಿ ಸ್ಥಾನವು ಒಕ್ಕಲಿಗರಿಗೆ ನೀಡಿರುವುದರಿಂದ, ಉಪ ಮುಖ್ಯಮಂತ್ರಿ ಹುದ್ದೆಯೂ ಅದೇ ಸಮುದಾಯಕ್ಕೆ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸ್ಪಷ್ಟಣೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ, ಉಪಮುಖ್ಯಮಂತ್ರಿ ಹುದ್ದೆ ಬದಲು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವಂತೆ ಡಿ.ಕೆ.ಶಿವಕುಮಾರ್‌ಗೆ ವೇಣುಗೋಪಾಲ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News