ಮೋದಿ, ಅಮಿತ್ ಶಾ ಅವರ ಅಶ್ವಮೇಧದ ಕುದುರೆಯನ್ನು ಜೆಡಿಎಸ್-ಕಾಂಗ್ರೆಸ್ ಕರ್ನಾಟಕದಲ್ಲಿ ಕಟ್ಟಿಹಾಕಿದೆ

Update: 2018-05-23 15:29 GMT

ಬೆಂಗಳೂರು, ಮೇ 23: ಉತ್ತರಪ್ರದೇಶದ ಚುನಾವಣಾ ಫಲಿತಾಂಶ ಪ್ರಕಟಗೊಂಡಾಗ ಪ್ರಧಾನಿ ಮೋದಿ, ಅಮಿತ್ ಶಾರ ಅಶ್ವಮೇಧಯಾಗದ ಕುದುರೆಯನ್ನು ರಾಜ್ಯದಲ್ಲಿ ಕಟ್ಟಿ ಹಾಕುವುದು ನಾವೇ ಎಂದು ಹೇಳಿದ್ದೆ. ಅದರಂತೆ, ಕಾಂಗ್ರೆಸ್ ಜೊತೆ ಸೇರಿ ಆ ಕೆಲಸ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅಮಿತ್ ಶಾ, ಮೋದಿ ಬಳಿ ಜೀವ ಇರದೆ ಇರುವ ಕುದುರೆಯನ್ನು ತೆಗೆದುಕೊಂಡು ಹೋಗಲಿ. ನಮ್ಮನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬುಧವಾರ ವಿಧಾನಸೌಧದಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ನಡುವೆ ಯಾವುದೆ ರೀತಿಯ ಅಸಮಾಧಾನಗಳಿಗೆ ಅವಕಾಶ ನೀಡಲ್ಲ. ಒಂದು ಕುಟುಂಬವಾಗಿ ಕೆಲಸ ಮಾಡುತ್ತೇವೆ ಎಂದರು. ರಾಜಕೀಯ ಘಟನೆಗಳನ್ನು ಬದಿಗಿಟ್ಟು, ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ನಮ್ಮ ಸರಕಾರ ಕೆಲಸ ಮಾಡಲಿದೆ. 20 ತಿಂಗಳು ಸಿಎಂ ಆಗಿದ್ದಾಗ ಹಲವಾರು ಅನುಭವಗಳಾಗಿವೆ. ಅವುಗಳ ಆಧಾರದ ಮೇಲೆ ನಮ್ಮ ಸರಕಾರ ಜನಸ್ನೇಹಿಯಾಗಿ ಕೆಲಸ ಮಾಡಲಿದೆ ಎಂದರು.

ರಾಜಕೀಯಕ್ಕಿಂತ ರಾಜ್ಯದ ಅಭಿವೃದ್ಧಿ ನಮ್ಮ ಸರಕಾರದಲ್ಲಿ ಅಗ್ರಸ್ಥಾನ ಪಡೆಯಲಿದೆ. ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರಷ್ಟು ಹೊಂದಾಣಿಕೆಯ ವ್ಯಕ್ತಿತ್ವ ಬೇರೆಯವರದ್ದಲ್ಲ. ಪರಸ್ಪರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನಾವು ನಡೆದುಕೊಳ್ಳಲಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು. ನಮ್ಮ ಸರಕಾರ ಗ್ರಾಮೀಣ ಪ್ರದೇಶ, ಒಂದು ವರ್ಗದವರಿಗೆ ಸೀಮಿತವಾದುದಲ್ಲ. ನಾವು ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುವುದಿಲ್ಲ. ಒಬ್ಬ ಸ್ವಾಮೀಜಿ ನಮ್ಮ ಬಗ್ಗೆ ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಸ್ವಾಮೀಜಿಗಳು ತಮ್ಮ ಪಾತ್ರವನ್ನು ಅರಿತುಕೊಳ್ಳಬೇಕು. ಇಲ್ಲದಿದ್ದರೆ, ನೇರವಾಗಿ ರಾಜಕಾರಣಕ್ಕೆ ಬಂದು ಬಿಡಲಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಬಸವಣ್ಣನವರ ಕಾಯಕವೇ ಕೈಲಾಸ, ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಎಂಬ ಕಲ್ಪನೆಯಲ್ಲಿ, ಎಲ್ಲ ಸಮಾಜದವರು ಸ್ವಾಭಿಮಾನದ ಬದುಕನ್ನು ಸರಕಾರದ ಕಾರ್ಯಕ್ರಮಗಳ ಮೂಲಕ ಪಡೆಯಬೇಕು ಎಂಬುದು ನಮ್ಮ ಉದ್ದೇಶ. ಯಾವುದೋ ಒಂದು ಸಮಾಜವನ್ನು ಮೆಚ್ಚಿಸಲು ನಾವು ಇಲ್ಲಿ ಕುಳಿತಿಲ್ಲ ಎಂದು ಅವರು ತಿರುಗೇಟು ನೀಡಿದರು. ಸಂಕುಚಿತ ಮನೋಭಾವನೆ ಬಿಡಿ, ನಾವೇನು ಮಾಡಬೇಕು ಎಂಬುದು ಗೊತ್ತಿದೆ. ವಚನ ಭ್ರಷ್ಟತೆಯನ್ನು ನಾನು ಮಾಡಿಲ್ಲ. ವಿಶ್ವಾಸಮತ ಯಾಚನೆ ಮಾಡುವಾಗ 12 ವರ್ಷದ ರಾಜಕೀಯ ಜೀವನದಲ್ಲಿ ನಾನು ಏನು ಮಾಡಿದ್ದೇನೆ ಎಂಬುದನ್ನು ಹೇಳುತ್ತೇನೆ. ರಾಜ್ಯದಲ್ಲಿ ಮುಳುಗುತ್ತಿದ್ದ ಬಿಜೆಪಿ ಪಕ್ಷವನ್ನು ಉಳಿಸಲು ನನ್ನನ್ನು ಹೇಗೆ ಬಳಸಿಕೊಂಡರು ಎಂಬುದು ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ನಗರದಲ್ಲಿನ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಬಿಬಿಎಂಪಿಯನ್ನು ನನ್ನ ಕಾಲದಲ್ಲಿ ರಚನೆ ಮಾಡಲಾಯಿತು. ಐದು ವರ್ಷಗಳಲ್ಲಿ 25 ಸಾವಿರ ಕೋಟಿ ರೂ.ಖರ್ಚು ಮಾಡಲು ಅವಕಾಶವಿದ್ದರೂ ಬಿಜೆಪಿಯವರು ಏನು ಮಾಡಿಲ್ಲ. ಬೆಂಗಳೂರಿಗೆ ಬಿಜೆಪಿ ಕೊಡುಗೆ ಏನು ಎಂಬುದನ್ನು ನಗರದ ನಾಗರಿಕರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಜೆಪಿ ಮೇಲೆ ನಿಮಗೇಕೆ ಅಷ್ಟು ಮೋಹ ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ಮುಖಂಡರ ಜೊತೆ ಚರ್ಚಿಸಿ ಸಮನ್ವಯ ಸಮಿತಿ ರಚನೆ ಮಾಡಿ, ಅಲ್ಲಿ ಎಲ್ಲ ರೀತಿಯ ಚರ್ಚೆಗಳನ್ನು ಮಾಡಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳುತ್ತೇವೆ. ಜನರ ಒಲವು ಎರಡು ಪಕ್ಷಗಳ ಬಗ್ಗೆ ಬರುವಂತೆ ಕಾರ್ಯಕ್ರಮಗಳು ರೂಪುಗೊಳ್ಳಲಿವೆ ಎಂದು ಕುಮಾರಸ್ವಾಮಿ ಹೇಳಿದರು.

ಮಹಾದಾಯಿ ನದಿ ವಿವಾದ ಕುರಿತು ಪ್ರಧಾನಿ ಚುನಾವಣಾ ಭಾಷಣ ಮಾಡಿದ್ದನ್ನು ಕೇಳಿದ್ದೇನೆ. ಮೂರು ರಾಜ್ಯಗಳ ವಾದ ಪ್ರತಿವಾದ ನ್ಯಾಯಾಧೀಕರಣದ ಎದುರು ಮುಗಿದಿದೆ. ಇನ್ನು ತೀರ್ಮಾನ ಬರುವುದಷ್ಟೇ ಬಾಕಿಯಿದೆ. ನರೇಂದ್ರಮೋದಿ ಕಚೇರಿಯಲ್ಲಿ ತೀರ್ಮಾನವಾಗುವ ಶಕ್ತಿ ಈಗ ಉಳಿದಿಲ್ಲ. ಮೋದಿ ಕಾಲಕಾಲಕ್ಕೆ ಸುಳ್ಳು ಹೇಳಿ, ಜನರ ಕಿವಿಗೆ ಕಮಲ ಮುಡಿಸುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News