×
Ad

ಡೆಪ್ಯೂಟಿ ಸಿಎಂಗೆ ಮಾನ್ಯತೆ ಇಲ್ಲ, ಕೇಳುವುದರಲ್ಲಿ ಅರ್ಥವೂ ಇಲ್ಲ: ಶಿವಾಚಾರ್ಯ ಸ್ವಾಮೀಜಿ

Update: 2018-05-23 19:42 IST

ಚಿತ್ರದುರ್ಗ, ಮೇ 23: ಉಪಮುಖ್ಯಮಂತ್ರಿ ಸ್ಥಾನಕ್ಕೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಲಿಂಗಾಯತ ಸಮುದಾಯ ಈ ಹುದ್ದೆ ಕೇಳುವುದರಲ್ಲಿ ಅರ್ಥವಿಲ್ಲ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಬುಧವಾರ ಸಿರಿಗೆರೆ ಬೃಹನ್ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬರಲು ಮತದಾರರೇ ಹೊಣೆ. ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ನೀಡಿದ್ದರೆ ಪಕ್ಷಗಳ ನಡುವೆ ಅನೈತಿಕ ಸಂಬಂಧ ಬೆಳೆಯುತ್ತಿರಲಿಲ್ಲ. ಕುದುರೆ ವ್ಯಾಪಾರವೂ ನಡೆಯುತ್ತಿರಲಿಲ್ಲ ಎಂದು ಹೇಳಿದರು.

ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲೇ ಭರವಸೆ ನೀಡಿದ್ದರು. ಈಗ ಅವರ ನಾಲಿಗೆ ಹೊರಳುತ್ತಿದೆ. ರಾಜಕೀಯ ನಾಟಕ ಹೇಗಿದೆ ಎಂಬುದನ್ನು ಇದು ತೋರಿಸುತ್ತಿದೆ. ಆದರೆ, ಅವರ ಸಾಲ ಮನ್ನಾ ಮಾಡಲು ಬದ್ಧವಾಗಿರಬೇಕು ಎಂದು ತಿಳಿಸಿದರು.

ರಾಜಕಾರಣಿಗಳಲ್ಲಿ ಆದರ್ಶಗಳು ಉಳಿದಿಲ್ಲ. ರಾಜ್ಯವನ್ನು ಅಭಿವೃದ್ಧಿ ಮಾಡುತ್ತಾರೆ ಎಂಬ ವಿಶ್ವಾಸ ಕೂಡ ಜನರಲ್ಲಿ ಉಳಿದಿಲ್ಲ. ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವಲ್ಲಿ ತಲ್ಲೀನರಾಗುತ್ತಾರೆ. ಹೊತ್ತು ಬಂದಂತೆ ಕೊಡೆ ಹಿಡಿಯುವ ಸಂಸ್ಕೃತಿ ರಾಜಕಾರಣಿಗಳಲ್ಲಿ ಬೆಳೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News