ಜಾತಿಯ ಹೆಸರಿನಲ್ಲಿ ಸ್ಥಾನಮಾನ ಪಡೆಯುವ ಅಗತ್ಯವಿಲ್ಲ: ಮಾಜಿ ಸಚಿವ ಎಚ್.ಕೆ.ಪಾಟೀಲ್

Update: 2018-05-23 14:53 GMT

ಬೆಂಗಳೂರು, ಮೇ 23: ಜಾತಿಯ ಹೆಸರಿನಲ್ಲಿ ಸ್ಥಾನಮಾನ ಪಡೆಯುವ ಅವಶ್ಯಕತೆ ತನಗಿಲ್ಲ. ಎಲ್ಲ ಸಮುದಾಯಗಳ ಪ್ರೀತಿ, ವಿಶ್ವಾಸವನ್ನು ಪಡೆದಿರುವ ನಾನು, ಅರ್ಹತೆಯ ಆಧಾರದ ಮೇಳೆ ಅವಕಾಶಗಳನ್ನು ಪಡೆದಿದ್ದೇನೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ನಾನು ಲಿಂಗಾಯತನಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕದ ಅಧ್ಯಕ್ಷ ಉಮೇಶ್ ಪಾಟೀಲ್ ತಮಗೆ ಬರೆದಿರುವ ಪತ್ರ ನೋಡಿ ಮುಜುಗರ ಹಾಗೂ ಆಶ್ಚರ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ವಿವರಣೆ ನೀಡಿ ಎಚ್.ಕೆ.ಪಾಟೀಲ್ ಪತ್ರ ಬರೆದಿದ್ದಾರೆ.

ನಾನು ಮತ್ತು ನನ್ನ ತಂದೆ ಅರ್ಧ ಶತಮಾನದಿಂದ ಸಾರ್ವಜನಿಕ ಜೀವನದಲ್ಲಿದ್ದೇವೆ. ನಾನು ಎಂದೂ ಜಾತಿ ಕೋಟಾದಡಿ ಸ್ಥಾನಮಾನ ಪಡೆಯಲು ಪ್ರಯತ್ನಿಸಿದವನಲ್ಲ. ರೆಡ್ಡಿ ಸಮಾಜದ ರಾಷ್ಟ್ರಮಟ್ಟದ ಸಮಾವೇಶದಲ್ಲಿ ನಾನು ಗೌರವಾಧ್ಯಕ್ಷನಾಗಿದ್ದೆ. ಮಹಾಯೋಗಿ ವೇಮನ ಹಾಗೂ ಹೇಮರೆಡ್ಡಿ ಮಲ್ಲಮ್ಮನ ಭಕ್ತ ನಾನು. ನನಗೆ ಜಾತಿಯ ಹೆಸರಿನಿಂದ ಸ್ಥಾನ ಪಡೆಯುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ.

ರಾಜಕಾರಣದಲ್ಲಿ ಅರ್ಹತೆ ಇಲ್ಲದವರು ಮಾತ್ರ ಜಾತಿ ಹೆಸರಿನಿಂದ ರಾಜಕಾರಣ ಮಾಡುತ್ತಾರೆ. ಗರಿಷ್ಠ ಅರ್ಹತೆಯಿಂದ ಸಾರ್ವಜನಿಕ ಸೇವೆಯಲ್ಲಿರುವವರು ಜಾತಿ ಮೇಲೆ ಸ್ಥಾನ ಕೇಳುವುದಿಲ್ಲ. ನಾನು, ರಾಜಕೀಯ ಪಕ್ಷಗಳು ಜಾತಿ ಮಾತ್ರ ಆಧಾರವಾಗಿಟ್ಟು ಸ್ಥಾನ ನೀಡುವುದನ್ನು ಹಾಗೂ ನಮ್ಮ ಪಕ್ಷದಲ್ಲಿ ಕೇವಲ ಜಾತಿ ಆಧಾರದ ಮೇಲೆ ಯಾವುದಾದರೂ ಸ್ಥಾನ ನೀಡುವುದನ್ನು ನಾನು ಮೆಚ್ಚುವುದಿಲ್ಲ, ಒಪ್ಪುವುದಿಲ್ಲ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ನಾನು ಹೊಂದಿರುವ ಅರ್ಹತೆಯ ಮೇಲೆ ಮಾತ್ರ ನನಗೆ ಸ್ಥಾನ ಸಿಗಬೇಕು, ಜಾತಿಯ ಹೆಸರಿನಿಂದ ಶೋಷಿತ ವರ್ಗಗಳನ್ನು ಹೊರತುಪಡಿಸಿ ಅಥವಾ ರಾಜಕೀಯವಾಗಿ ಶೋಷಿತರಾದ ಸಮುದಾಯಗಳನ್ನು ಹೊರತುಪಡಿಸಿ ಇತರರಿಗೆ ಅರ್ಹತೆಯಿಲ್ಲದೆ ಜಾತಿ ಮಾತ್ರ ಕಾರಣಕ್ಕೆ ಅವಕಾಶ ನೀಡಕೂಡದೆಂಬ ನಿಲುವು ನನ್ನದು ಎನ್ನುವುದನ್ನು ಸ್ಪಷ್ಟಪಡಿಸುವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News