ಯುವಜನತೆ ಸಶಕ್ತರಾದರೆ ದೇಶ ಸದೃಢ: ರಾಜ್ಯಪಾಲ ವಜುಭಾಯಿ ವಾಲಾ

Update: 2018-05-23 14:56 GMT

ಬೆಂಗಳೂರು, ಮೇ 23: ದೇಶದ ಯುವಜನತೆ ವಿಚಾರದಿಂದ ಸಶಕ್ತರಾದರೆ ಮಾತ್ರ ದೇಶ ಸದೃಡವಾಗುತ್ತದೆ ಎಂದ ರಾಜ್ಯಪಾಲ ವಜುಭಾಯಿ ವಾಲಾ ಅಭಿಪ್ರಾಯಿಸಿದರು.

ಮಂಗಳವಾರ ನಗರದ ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಆದಷ್ಟು ಪ್ರಚಾರ ಮತ್ತು ಪ್ರಸಾರವಾಗುವುದರಿಂದ ದೇಶವು ಉನ್ನತ ಹಾದಿಯಲ್ಲಿ ಸಾಗುತ್ತದೆ ಎಂದು ತಿಳಿಸಿದರು.

ವರ್ತಮಾನದಲ್ಲಿ ವಿದ್ಯಾರ್ಥಿಗಳು ವ್ಯಸನಮುಕ್ತ ಹಾಗೂ ಆಡಂಬರ ಶೋಕಿ ಜೀವನಕ್ಕೆ ಮನಸೋಲದೆ ಹೊಸ ಹೊಸ ಆವಿಷ್ಕಾರದ ಯೋಚನೆ ಮತ್ತು ಯೋಜನೆ ರೂಪಿಸಬೇಕು, ಆ ಯೋಜನೆಗಳು ದೇಶಕ್ಕೆ ಸದುಪಯೋಗವಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಮಾಡಬೇಕೆಂದು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಡಾ.ಎಂ.ಪಿ.ಪೂನಿಯಾ ಮಾತನಾಡಿ, ಈಗಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಬರಿ ಪುಸ್ತಕದ ಹುಳುವಾಗುತ್ತಿದ್ದಾರೆಯೆ ವಿನಃ ಉದ್ಯಮ ಕ್ಷೇತ್ರದಲ್ಲಿ ಯಾವುದೇ ಸಾಧನೆ ಮಾಡುತ್ತಿಲ್ಲ. ಹೀಗಾಗಿ ನಮ್ಮ ಸಂಸ್ಥೆಯ ಮೂಲಕ ಮೊದಲ ವರ್ಷದಿಂದಲೇ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು.

ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ವಿ. ಗೌತಮ್ ಮಾತನಾಡಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿದ ತಕ್ಷಣ ಅವರಿಗೆ ಅಪಾರವಾದ ಅವಕಾಶಗಳಿವೆ. ಆದರೆ, ಆ ಅವಕಾಶಗಳನ್ನು ಗಿಟ್ಟಿಸಿಕೊಳ್ಳದೇ ಅಲ್ಲಗಳೆಯುತ್ತಿರುವುದು ವಿಷಾದನೀಯ, ಕನಿಷ್ಟ ಒಂದು ವರ್ಷವಾದರು ಒಬ್ಬ ವಿದ್ಯಾರ್ಥಿ ಉದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಭವಿಷ್ಯತ್‌ನಲ್ಲಿ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಮಾರ್ಟ್ ಸಿಟಿಗಳ ಯೋಜನೆಗಳಲ್ಲಿ ಉದ್ಯೋಗಾವಕಾಶಗಳು ಸಾಕಷ್ಟಿವೆ. ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಲೇಜಿನ ಕಾರ್ಯದರ್ಶಿ ಗಾಳಿಸ್ವಾಮಿ, ಉಪಕುಲಪತಿ ಜನಾರ್ಧನ, ಪ್ರಾಂಶುಪಾಲ ಸಿ.ಪಿ.ಎಸ್.ಪ್ರಕಾಶ, ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷನಾರಾಯಣ, ಸೃಷ್ಟಿ ಸಂಚಾಲಕರಾದ ಗಿರೀಶ ಬಡಿಗೇರ, ಗುರುಪ್ರಸಾದ್ ಕಡಗದ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News