ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರಕ್ಕೆ ಶುಭ ಕೋರಿದ ಸಿಪಿಐ

Update: 2018-05-23 15:01 GMT

ಬೆಂಗಳೂರು, ಮೇ 23: ಜಾತ್ಯತೀತ, ಪ್ರಜಾಪ್ರಭುತ್ವ ನಿಲುವುಳ್ಳ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವುದು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಿಸಿರುವ ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ನೂತನ ಸಮ್ಮಿಶ್ರ ಸರಕಾರಕ್ಕೆ ಶುಭ ಕೋರಿದೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಧಾಕರರೆಡ್ಡಿ, ಕರ್ನಾಟಕದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರ ರಚನೆ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಬಿಜೆಪಿಯ ಕೋಮುವಾದಿ ನಿಲುವಿನಿಂದ ರಾಜ್ಯದ ಜನರಿಗೆ ಉಳಿಗಾಲವಿಲ್ಲ ಎಂದು ಅರಿತ ಎರಡು ಪಕ್ಷಗಳು ಒಗ್ಗೂಡಿವೆ. ಈ ನಿರ್ಧಾರದಿಂದ ರಾಜ್ಯದ ಜನರಿಗೆ ಅನುಕೂಲಕರವಾಗಲಿದೆ. ಅಲ್ಲದೆ, ಎರಡು ಕ್ಷೇತ್ರಗಳ ಚುನಾವಣೆಯಲ್ಲಿ ಜಾತ್ಯತೀತ ಪಕ್ಷಗಳು ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಳ್ಳುವುದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಜೆಡಿಎಸ್ ಹಾಗೂ ಕಾಂಗ್ರಸ್ ಮೈತ್ರಿಯಲ್ಲಿ ಪ್ರಾಯೋಗಿಕವಾಗಿ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಜಾತ್ಯತೀತ ಹಾಗೂ ಪ್ರಜಾಪ್ರಭುತ್ವ ಹಿತಾಸಕ್ತಿಯುಳ್ಳ ಈ ಎರಡೂ ಪಕ್ಷಗಳು ಪರಸ್ಪರ ಮಾತುಕತೆ ಮೂಲಕ, ಒಪ್ಪಂದ ಮಾಡಿಕೊಂಡು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಸಮ್ಮಿಶ್ರ ಸರಕಾರ ಜಾರಿ ಮಾಡುವ ಯೋಜನೆಗಳು ರಾಜ್ಯದ ರೈತರು ಹಾಗೂ ದುರ್ಬಲ ವರ್ಗದ ಜನರಿಗೆ ಅನುಕೂಲವಾಗುವಂತಿರಬೇಕು. ಜೊತೆಗೆ ಜನರ ಸಂಪೂರ್ಣ ವಿಶ್ವಾಸ ಗಳಿಸುವಂತಿರಬೇಕು ಎಂದ ಅವರು, ಈ ಎರಡು ಪಕ್ಷಗಳ ಶಾಸಕರು ಬಿಜಿಪಿ ನೀಡುವ ಯಾವುದೇ ಆಮಿಷಕ್ಕೆ ಒಳಗಾಗಬಾರದು ಎಂದು ಹೇಳಿದರು.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಪಡೆದು ಬಹುಮತ ಸಾಬೀತು ಪಡಿಸಲು ಸುಪ್ರೀಂ ಕೋರ್ಟ್‌ನ 15 ದಿನಗಳ ಕಾಲಾವಕಾಶವನ್ನು ದುರ್ಬಳಕೆ ಮಾಡಿಕೊಳ್ಳಲು ಬಿಜೆಪಿ ಮುಂದಾಗಿತ್ತು ಎಂದ ಅವರು, ಸಂವಿಧಾನ ಗೌರವಿಸಬೇಕಾದ ಘನವೆತ್ತ ರಾಜ್ಯಪಾಲರು ಬಿಜೆಪಿಗೆ ತಮ್ಮ ನಿಷ್ಠೆ ತೋರಿಸಿದ್ದು ಸರಿಯಲ್ಲ ಎಂದು ಹೇಳಿದರು.

ಬಿಜಿಪಿ ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಸರಕಾರ ರಚನೆ ಮಾಡಲು ಕೈಗೊಂಡ ಕ್ರಮಕ್ಕೆ ವಿರೋಧವಾಗಿ ಕರ್ನಾಟಕದಲ್ಲಿ ಸರಕಾರ ರಚನೆಗೆ ಮುಂದಾಗಿದ್ದುದು ಬಿಜೆಪಿಯ ದ್ವಿಮುಖ ನಡೆಗೆ ಪ್ರಮುಖ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಚುನಾವಣಾ ಪೂರ್ವ ಪ್ರಚಾರದಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣಗಳು ಘನತೆಯಿಂದ ಕೂಡಿರಲಿಲ್ಲ ಎಂದು ದೂರಿದ ಅವರು, ಕೋಮುವಾದಿ ಪಕ್ಷವೊಂದನ್ನು ತಿರಸ್ಕರಿಸಿದ ಕರ್ನಾಟಕದ ಜನತೆಗೆ ನಮ್ಮ ವಂದನೆಗಳು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News