ರಾಜರಾಜೇಶ್ವರಿ ನಗರ ಮುಕ್ತ ಮತದಾನಕ್ಕೆ ಚುನಾವಣಾ ಆಯೋಗ ಸಿದ್ಧತೆ

Update: 2018-05-23 15:05 GMT

ಬೆಂಗಳೂರು, ಮೇ 23: ಮತದಾರರ ಗುರುತಿನ ಚೀಟಿ ಅಪಾರ್ಟ್‌ಮೆಂಟ್ ಒಂದರಲ್ಲಿ ದೊರೆತ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಈ ತಿಂಗಳ 28ರಂದು ನಡೆಯಲಿದ್ದು, ರಾಜ್ಯ ಚುನಾವಣಾ ಆಯೋಗವು ಸುಸೂತ್ರವಾಗಿ ನಡೆಸಲು ಎಲ್ಲ ಸಿದ್ಧತೆಗಳನ್ನು ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿ ತರಲು ಇನ್ನಷ್ಟುಹೆಚ್ಚಿನ ತಂಡಗಳನ್ನು ನಿಯೋಜಿಸಿದೆ.

ವಿಧಾನಸಭಾ ಕ್ಷೇತ್ರದಲ್ಲಿ 4,71,900 ಮತದಾರರು ಮತ ಚಲಾಯಿಸಲಿದ್ದಾರೆ. ಈ ಕ್ಷೇತ್ರದಲ್ಲಿ 376 ಮತಗಟ್ಟೆಗಳಿದ್ದು, ಹೆಚ್ಚುವರಿಯಾಗಿ 45 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆದ ಬಿಬಿಎಂಪಿ ಆಯುಕ್ತ ಮಹೇಶ್ವರರಾವ್ ಅವರು ತಿಳಿಸಿದರು.

ಈಗಾಗಲೇ 2524 ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದ್ದು, ಗುರುವಾರ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ತರಬೇತಿ ಕಾರ್ಯಾಗಾರವನ್ನು ನಡೆಸಲಾಗುವುದು ಎಂದು ಹೇಳಿದರು.

ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 4 ಕ್ಲಿಷ್ಟಕರ ಮತಗಟ್ಟೆಗಳು, 47 ಅತಿಸೂಕ್ಷ್ಮ, 186 ಸೂಕ್ಷ್ಮ ಮತ್ತು 184 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.

ಚುನಾವಣಾ ಕಾರ್ಯಕ್ಕಾಗಿ 83 ಬಸ್‌ಗಳನ್ನು ನಿಯೋಜಿಸಲಾಗಿದೆ ಎಂದ ಅವರು, ಚುನಾವಣಾ ಕಾರ್ಯಕ್ಕಾಗಿ ಎಂ3 ಮಾದರಿಯಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. 421 ಕಂಟ್ರೋಲ್ ಯುನಿಟ್, 421 ಬಯೋಲೆಟ್ ಯೂನಿಟ್, 421 ವಿವಿಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. ಶೇ.20ರಷ್ಟು ಹೆಚ್ಚುವರಿ ಎಂ3ಇವಿಎಂಗಳನ್ನು ಇಡಲಾಗಿದೆ ಎಂದರು.

1165 ಅಂಚೆಮತ ಪತ್ರಗಳಿದ್ದು, ಈ ತಿಂಗಳ 21ರವರೆಗೆ 607 ಅಂಚೆ ಮತಪತ್ರಗಳನ್ನು ಸ್ವೀಕರಿಸಲಾಗಿದೆ. ಮತ ಎಣಿಕೆ ಕಾರ್ಯ ಮೇ 31ರಂದು ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News