ಬೆಂಗಳೂರು: ಮಳೆಗೆ ನಗರದ ವಿವಿಧೆಡೆ ಸಂಚಾರ ದಟ್ಟಣೆ

Update: 2018-05-23 15:07 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 23: ನಗರದೆಲ್ಲೆಡೆ ಸುರಿದ ಮಳೆಯಿಂದಾಗಿ ನೀರು ರಸ್ತೆಯಲ್ಲೇ ನಿಂತಿದ್ದರಿಂದ ನಗರದ ವಿವಿಧ ಕಡೆ ಸಂಚಾರ ದಟ್ಟಣೆ ಸಮಸ್ಯೆ ತಲೆದೋರಿತು.

ಬುಧವಾರ ನಗರದ ಸಿಲ್ಕ್‌ಬೋರ್ಡ್, ಬನ್ನೇರುಘಟ್ಟ ರಸ್ತೆ, ಇಬ್ಬಲೂರು ಇಕೋಸ್ಪೇಸ್, ಕೆ.ಆರ್.ಪುರ, ಕೆಆರ್‌ಮಾರುಕಟ್ಟೆ, ಕೆಂಪೆಗೌಡ ಬಸ್ ನಿಲ್ದಾಣ ಮುಖ್ಯರಸ್ತೆ, ಸೇರಿದಂತೆ ಅನೇಕ ಕಡೆಗಳಲ್ಲಿ ಸಂಚಾರ ದಟ್ಟಣೆ ಕಾಣುತಿತ್ತು.

ಮಧ್ಯಾಹ್ನ ಹಾಗೂ ಕಚೇರಿ ಬಿಡುವ ವೇಳೆಯಲ್ಲೇ ಮಳೆ ಆರಂಭವಾಗಿದ್ದರಿಂದ ಮನೆಗೆ ಹೋಗುವ ಧಾವಂತದಲ್ಲಿದ್ದ ಉದ್ಯೋಗಿಗಳು ತೊಂದರೆ ಅನುಭವಿಸಿದರು. ನಿತ್ಯವೂ ಇರುವ ಸಂಚಾರ ದಟ್ಟಣೆಯೊಂದಿಗೆ ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ಸಮಸ್ಯೆ ದುಪ್ಪಟ್ಟಾಗಿತ್ತು.

ಮೈಸೂರು ರಸ್ತೆ, ಶ್ರೀರಾಂಪುರ, ಆರ್‌ಟಿನಗರ ರಸ್ತೆ, ಮಡಿವಾಳ, ಕೋರಮಂಗಲ, ಹೊಸೂರು ರಸ್ತೆ ಹಾಗೂ ಟಿನ್‌ಫ್ಯಾಕ್ಟರಿ ಜಂಕ್ಷನ್‌ನಲ್ಲಿ ಕಿಲೋಮೀಟರ್‌ಗಟ್ಟಲೆ ದೂರದವರೆಗೂ ವಾಹನಗಳು ನಿಂತಿದ್ದವು. ಸವಾರರು ಗಂಟೆಗಟ್ಟಲೆ ವಾಹನಗಳಲ್ಲಿ ಕುಳಿತು ಕಿರಿಕಿರಿ ಅನುಭವಿಸಿದರು.
ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸಂಚಾರ ವಿಭಾಗದ ಪೊಲೀಸರು ಹರಸಾಹಸಪಟ್ಟರು. ಮಳೆಯೊಂದಿಗೆ ಗಾಳಿಯೂ ಬೀಸಿದ್ದರಿಂದ ಕೆಲ ಕಡೆ ಮರಗಳು ಧರೆಗುರುಳಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ವಿಧಾನಸೌಧ: ನೂತನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ವಿಧಾನಸೌಧ ಸುತ್ತಮುತ್ತ, ಕೆಆರ್ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಬಳ್ಳಾರಿ ರಸ್ತೆ ಸೇರಿದಂತೆ ಹಲವು ಕಡೆಯೂ ವಾಹನ ಸವಾರರು ಸಂಚಾರ ದಟ್ಟಣೆ ಸಮಸ್ಯೆ ಎದುರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News