ಪ್ರಮಾಣ ವಚನ ಸ್ವೀಕಾರ ಸಮಾರಂಭ: ಸಂಭ್ರಮದಲ್ಲಿ ಮಿಂದೆದ್ದ ಸಾವಿರಾರು ಜನ

Update: 2018-05-23 15:38 GMT

ಬೆಂಗಳೂರು, ಮೇ 23: ಮಧ್ಯಾಹ್ನದಿಂದಲೇ ಆರಂಭವಾದ ಮಳೆಯ ಸಿಂಚನ, ತೀವ್ರ ಸಂಚಾರ ದಟ್ಟಣೆಯ ನಡುವೆಯೇ ನೂತನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಜನರು ಸಾಕ್ಷಿಯಾದರು.

ಬುಧವಾರ ಸಂಜೆ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಪೂರ್ವದ್ವಾರದಲ್ಲಿನ ವೈಭವೋಪೇತ ಮೆಟ್ಟಿಲುಗಳ ಮೇಲೆ ಏರ್ಪಡಿಸಿದ್ದ ಅದ್ದೂರಿ ಸಮಾರಂಭಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ಸುಮಾರು 1ಲಕ್ಷಕ್ಕೂ ಅಧಿಕ ಮಂದಿ ಸಾರ್ವಜನಿಕರು ಕಿಕ್ಕಿರಿದು ನೆರೆದಿದ್ದರು.

ಬೆಂಗಳೂರು ನಗರದ ಎಲ್ಲ ರಸ್ತೆಗಳು ವಿಧಾನಸೌಧದತ್ತಲೇ ಸಾಗುತ್ತವೇನೋ ಎಂಬ ರೀತಿಯಲ್ಲಿ ಭಾಸವಾಗುವಂತೆ ಶಕ್ತಿಸೌಧದ ಮುಂಭಾಗದಲ್ಲಿನ ವಿಧಾನಸೌಧ- ಹೈಕೋರ್ಟ್ ನಡುವಿನ ಅಂಬೇಡ್ಕರ್ ವೀಧಿಯಲ್ಲಿ ಜನ ಸಾಗರವೇ ಸೇರಿತ್ತು. ‘ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಎಂಬ ಹೆಸರಿನವನಾದ ನಾನು..’ ಎಂದು ಹೇಳುತ್ತಿದ್ದಂತೆ ನೆರೆದಿದ್ದ ಜನತೆ ಹರ್ಷೋದ್ಘಾರದಲ್ಲಿ ಮಿಂದೆದ್ದರು.

ಅಲ್ಲದೆ, ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಜೈ, ನೂತನ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಜೈ..ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಜಯವಾಗಲಿ ಎಂಬ ಘೋಷಣೆಗಳು ಏಕಕಾಲಕ್ಕೆ ಮುಗಿಲು ಮುಟ್ಟಿದ್ದವು. ಕಾಂಗ್ರೆಸ್-ಜೆಡಿಎಸ್ ಬಾವುಟಗಳು ಏಲ್ಲೆಡೆ ರಾರಾಜಿಸುತ್ತಿದ್ದವು.

ಬಡವರು-ರೈತರಿಗೆ ಒಳ್ಳೆಯದು: ‘ರಾಜ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬಂದಿರುವುದರಿಂದ ಬಡವರು, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ದೇವನಹಳ್ಳಿಯ ರೈತ ಯುವಕ ಆನಂದ್ ಅಭಿಮತವಾಗಿದೆ.

ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಅಂಬೇಡ್ಕರ್ ವೀದಿ, ಜಿಪಿಓ ವೃತ್ತ, ಹೈಕೋರ್ಟ್ ವೃತ್ತ ಹಾಗೂ ವಿಧಾನಸೌಧದ ಆವರಣದಲ್ಲಿ ಸಿಹಿ ಹಂಚಿದರು. ಅಲ್ಲದೆ, ಕೆಆರ್ ವೃತ್ತದಲ್ಲಿ ಅಭಿಮಾನಿಯೊಬ್ಬ ಎಲ್ಲರಿಗೂ ನೂರಾರು ಮಜ್ಜಿಗೆ ಪ್ಯಾಕೇಟ್ ಹಂಚಿ ಸಂಭ್ರಮಿಸಿದರು.

ಪೊಲೀಸ್ ಸರ್ಪಗಾವಲು: ನೂತನ ಸಿಎಂ ಪ್ರಮಾಣ ವಚನ ಸಮಾರಂಭಕ್ಕೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

‘ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬಂದಿರುವುದು ಸಂತೋಷ ತಂದಿದೆ. ಕುಮಾರಸ್ವಾಮಿ ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿ ಯಾಗಿರಲಿದ್ದು, ಉತ್ತಮ ಆಡಳಿತ ನೀಡಲಿದ್ದಾರೆ. ಇದಕ್ಕೆ ಕುಟುಂಬದ ಸಂಪೂರ್ಣ ಸಹಕಾರವಿರುತ್ತದೆ’
-ಭವಾನಿ ರೇವಣ್ಣ, ಮಾಜಿ ಸಚಿವ ಎಚ್.ರೇವಣ್ಣ ಅವರ ಪತ್ನಿ

‘ಡಾ.ಜಿ.ಪರಮೇಶ್ವರ್ ಅವರು ರಾಜ್ಯದ ನೂತನ ಉಪ ಮುಖ್ಯಮಂತ್ರಿಯಾಗಿದ್ದು, ಕೊನೆಗೂ ಅವರಿಗೆ ನ್ಯಾಯಸಿಕ್ಕಂತೆ ಆಗಿದೆ. ಅವರು ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇದೆ. ಅದಕ್ಕೆ ದೇವರ ಅನುಗ್ರಹವೂ ಬೇಕು. ಆದರೆ, ಅವರು ಇದೀಗ ಡಿಸಿಎಂ ಆಗಿದ್ದು ಸಂತಸ ತಂದಿದೆ’
-ಕನ್ನಿಕಾ ಜಿ.ಪರಮೇಶ್ವರ್, ನೂತನ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ಪತ್ನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News