ಲಾಲ್‌ಬಾಗ್‌ನಲ್ಲಿ ಮಾವು-ಹಲಸು ಮೇಳ: ಗ್ರಾಹಕರಿಗೆ ಸಿಗಲಿವೆ ತರಹೇವಾರಿ ಮಾವು-ಹಲಸು

Update: 2018-05-23 16:37 GMT

ಬೆಂಗಳೂರು, ಮೇ 22: ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದಿಂದ ಮೇ 25 ರಿಂದ ಜೂ.15ರವರೆಗೆ ನಗರದ ಲಾಲ್ ಬಾಗ್‌ನಲ್ಲಿ ಮಾವು ಮತ್ತು ಹಲಸು ಹಣ್ಣಿನ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ (ಹಣ್ಣುಗಳು) ಕೆ.ಎಂ.ಪರಶಿವಮೂರ್ತಿ ಮಾತನಾಡಿ, ಲಾಲ್‌ಬಾಗ್‌ನಲ್ಲಿ ಮೂರು ವಾರಗಳ ಕಾಲ ನಡೆಯುವ ಮಾವು ಹಲಸು ಮಾರಾಟ ಮೇಳ ನಡೆಯಲಿದೆ ಎಂದು ಅವರು ಹೇಳಿದರು.

ಮೇ 25ರಂದು ಬೆಳಗ್ಗೆ 12ಕ್ಕೆ ಕೃಷಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್ ಉದ್ಘಾಟಿಸಲಿದ್ದಾರೆ. ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ಎಂ.ಮಹೇಶ್ವರ್ ರಾವ್, ತೋಟಗಾರಿಕೆ ಇಲಾಖೆ ನಿರ್ದೇಶಕ ವೈ.ಎಸ್.ಪಾಟೀಲ್ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಮಳೆ ಬಂದ ಕಾರಣ ಈ ಬಾರಿ ಮಾವು ಮಾರುಕಟ್ಟೆಗೆ ಬರುವುದು ವಿಳಂಬವಾಗಿದೆ. ಅಲ್ಲದೆ ಇಳುವರಿಯೂ ಕಡಿಮೆಯಾಗಿದೆ. ಹೀಗಾಗಿ ಮೇ ತಿಂಗಳಾಂತ್ಯದಲ್ಲಿ ಮಾವು ಮತ್ತು ಹಲಸು ಮೇಳ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಮೇಳದಲ್ಲಿ ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರದ ರೈತರು ನೇರವಾಗಿ ಗ್ರಾಹಕರಿಗೆ ಹಣ್ಣುಗಳನ್ನು ಮಾರಾಟ ಮಾಡಲಿದ್ದಾರೆ. ಮೇಳದಲ್ಲಿ 30-40 ಮಾವು ಹಾಗೂ 10-12 ಹಲಸು ತಳಿಗಳನ್ನು ಪ್ರದರ್ಶಿಸಲಾಗುವುದು. ಮೇಳಕ್ಕಾಗಿ ಲಾಲ್‌ಬಾಗ್‌ನಲ್ಲಿ 90 ಮಳಿಗೆಗಳನ್ನು ತೆರೆಯಲಾಗಿದೆ. ಇದರಲ್ಲಿ 80 ಮಳಿಗೆಗಳನ್ನು ಮಾವು ಮಾರಾಟಗಾರರಿಗೆ ಹಾಗೂ 10 ಮಳಿಗೆಗಳನ್ನು ಹಲಸು ಮಾರಾಟಗಾರರಿಗೆ ನೀಡಲಾಗುವುದು ಎಂದು ವಿವರಿಸಿದರು.

ಈ ಬಾರಿ ಮೇಳದಲ್ಲಿ ಸಹಜವಾಗಿ ಮಾಗಿದ ಹಾಗೂ ಇಥಲೀನ್ ಬಳಸಿ ಮಾಗಿಸಿದ ಹಣ್ಣುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಕಾರ್ಬೈಡ್ ಉಪಚಾರದಿಂದ ಮಾಗಿಸಿದ ಹಣ್ಣುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮೇಳದಲ್ಲಿ ಪ್ಲಾಸ್ಟಿಕ್ ಬಳಕೆ ಇರುವುದಿಲ್ಲ. ಗ್ರಾಹಕರು ಕೈಚೀಲ ತರಬೇಕೆಂದು ತಿಳಿಸಿದರು.

ಎಲ್ಲೆಲ್ಲಿ ಮೇಳ?: ಮೇ 26ರಂದು ಎಫ್ಕೆಸಿಸಿಐ ನಲ್ಲಿ ಮೇ 26ರಂದು ಮೇಳ ಆಯೋಜಿಸಲಾಗಿದೆ. ಶನಿವಾರ ಮತ್ತು ಭಾನುವಾರ ಕಬ್ಬನ್ ಉದ್ಯಾನವನದಲ್ಲಿ 10 ಮಳಿಗೆಗಳ ಮೂಲಕ ಮೇಳ ನಡೆಸಲಾಗುವುದು. ಮೇಳದಲ್ಲಿ ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸಬಹುದು. ಅಲ್ಲದೆ, ವಿಧಾನಸೌಧದ ಮೆಟ್ರೋ ನಿಲ್ದಾಣವನ್ನು ಹೊರತುಪಡಿಸಿ, ಉಳಿದೆಲ್ಲ ಮೆಟ್ರೋ ನಿಲ್ದಾಣಗಳಲ್ಲಿಯೂ ಮೇಳ ಆಯೋಜಿಸಲಾಗುವುದು. ಬೆಳಗ್ಗೆ 8ರಿಂದ ಸಂಜೆ 7ರವರೆಗೆ ಮೇಳಕ್ಕೆ ಭೇಟಿ ನೀಡಬಹುದಾಗಿದೆ ಎಂದು ಅವರು ವಿವರಿಸಿದರು.

ಮ್ಯಾಂಗೋ ಪಿಕ್ಕಿಂಗ್ ಟೂರಿಸಂ: ರಾಮನಗರದಲಿ ಮೇ 24 ರಿಂದ 28ರವರೆಗೆ, ಮಂಡ್ಯದಲ್ಲಿ ಮೇ 25 ರಿಂದ 29ರವರೆಗೆ, ಹಾಗೂ ಧಾರವಾಡದಲ್ಲಿ ಮೇ 26 ರಿಂದ 28ರವರೆಗೆ ಮಾವು ಹಲಸು ಮೇಳ ನಡೆಯಲಿದೆ. ಮೇ 27ರಿಂದ ಮಾವಿನ ಹಣ್ಣಿನ ಕಾಲ ಇರುವವರೆಗೂ ನಿಗಮದ ವತಿಯಿಂದ ಪ್ರತಿ ಭಾನುವಾರ ಮ್ಯಾಂಗೋ ಪಿಕ್ಕಿಂಗ್ ಟೂರಿಸಂ ಆಯೋಜಿಸಲಾಗುವುದು. ಗ್ರಾಹಕರು ತಮಗಿಷ್ಟವಾದ ಹಣ್ಣುಗಳನ್ನು ತಾವೇ ತೋಟಕ್ಕೆ ಹೋಗಿ ಕಿತ್ತು ಸವಿಯಬಹುದಾಗಿದೆ ಎಂದರು.

ನಿಪಾ ವೈರಸ್ ಮುಕ್ತ ಹಣ್ಣುಗಳು
ಎಲ್ಲಡೆ ನಿಪಾ ವೈರಸ್ ಬಗ್ಗೆ ಆತಂಕ ಎದುರಾಗಿದೆ. ಆದರೆ, ರಾಜ್ಯದ ಮಾವಿನ ಹಣ್ಣುಗಳು ನಿಪಾ ವೈರಾಣುವಿನಿಂದ ಮುಕ್ತವಾಗಿವೆ. ಬಾವುಲಿಗಳು ದ್ರಾಕ್ಷಿ ಹಣ್ಣನ್ನು ಹೆಚ್ಚಾಗಿ ಸೇವಿಸುತ್ತವೆ. ಅವು ಮಾವಿನ ಹಣ್ಣನ್ನು ಸೇವಿಸುವುದು ಕಡಿಮೆ. ನಮ್ಮ ರೈತರು ಮಾವಿನ ಮರಗಳಿಗೆ ಅಗತ್ಯ ರಕ್ಷಣೆ ಒದಗಿಸಿರುವುದರಿಂದ ಇಲ್ಲಿನ ಹಣ್ಣುಗಳಿಗೆ ನಿಪಾ ವೈರಾಣು ತಗುಲಿಲ್ಲ. ಹೀಗಾಗಿ ಗ್ರಾಹಕರು ಯಾವುದೇ ಭಯವಿಲ್ಲದೆ ಮಾವಿನ ಹಣ್ಣನ್ನು ಸೇವಿಸಬಹುದು ಎಂದು ಕೆ.ಎಂ.ಪರಶಿವಮೂರ್ತಿ ತಿಳಿಸಿದರು.

ಈ ಬಾರಿ ‘ಟಿಪ್ಪು ಮಾವು’ ಇಲ್ಲ....
ಪ್ರತಿ ವರ್ಷದ ಮಾವು ಮೇಳದಲ್ಲಿ ಟಿಪ್ಪು ಕಾಲದಲ್ಲಿ ನೆಟ್ಟಿದ್ದ ಮಾವಿನ ಮರದ ಹಣ್ಣುಗಳನ್ನು ವಿಶೇಷವಾಗಿ ಪ್ರದರ್ಶಿಸಲಾಗುತ್ತಿತ್ತು. ಆದರೆ ಕಳೆದ ನವೆಂಬರ್‌ನಲ್ಲಿ ಬಿದ್ದ ಭಾರೀ ಮಳೆಯಿಂದಾಗ ಟಿಪ್ಪು ಕಾಲದ ಮಾವು ಮರ ಬಿದ್ದು ಹೋಗಿದೆ. ಹೀಗಾಗಿ, ಈ ಬಾರಿ ಮಾವು ಮೇಳದಲ್ಲಿ ಟಿಪ್ಪು ನೆಟ್ಟಿದ್ದ ಮೊದಲ ಮಾವಿನ ಮರದ ಹಣ್ಣು ಪ್ರದರ್ಶನಗೊಳ್ಳುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News