ಭಾರತದ ಅಧಿಕಾರಶಾಹಿಗಳು ಅರಣ್ಯ ನಿವಾಸಿಗಳ ಬಗ್ಗೆ ಹೆಚ್ಚು ಯೋಚಿಸಬೇಕಿದೆ

Update: 2018-05-23 18:31 GMT

19ನೇ ಶತಮಾನದ ಸಮಾಜಶಾಸ್ತ್ರಜ್ಞ ಮ್ಯಾಕ್ಸ್ ವೆಬರ್ ಪ್ರಜಾಪ್ರಭುತ್ವದ ಸದ್ಗುಣಗಳನ್ನು ಶ್ಲಾಘಿಸಿದ್ದಾನೆ. ಭಾರತದಲ್ಲಿ ಹಲವು ದಶಕಗಳಿಂದಲೂ ಪ್ರಜಾಪ್ರಭುತ್ವದ ಬಲವಾದ ಅಚ್ಚಿನಲ್ಲಿ ದೇಶವನ್ನಾಳಲಾಗುತ್ತಿದೆ. ಆದರೆ ಅದರ ಸದ್ಗುಣಗಳು ಕೊಂಡಾಡುವುದು ಮಾತ್ರ ಈಗ ಅಸಾಧ್ಯ. ಬೃಹತ್ ಮಟ್ಟದಲ್ಲಿ ಜನರಿಗೆ ಅನ್ವಯವಾಗುವ ಹಸ್ತಕ್ಷೇಪಗಳು ಮತ್ತು ಪರಿಹಾರಗಳನ್ನು ಅಧಿಕಾರಶಾಹಿ ರಚನೆಗಳ ಮೂಲಕ ಸೂಕ್ತವಾಗಿ ಅನುಷ್ಠಾನಗೊಳಿಸಬಹುದಾಗಿದೆ. ಹಸ್ತ್ತಕ್ಷೇಪವನ್ನು ಉತ್ತಮವಾಗಿ ಯೋಜಿಸಿದ್ದರೆ ಮತ್ತು ಅದನ್ನು ಅನುಷ್ಠಾನಗೊಳಿಸುವ ಅಧಿಕಾರಶಾಹಿ ಪ್ರಾಮಾಣಿಕರಾಗಿದ್ದರೆ ಅಂಥ ಪರಿಹಾರಗಳ ಫಲಿತಾಂಶ ಅತ್ಯುತ್ತಮವಾಗಿರುತ್ತವೆ. ಬೃಹತ್ ಮಟ್ಟದಲ್ಲಿ ಚುನಾವಣೆಗಳನ್ನು ನಡೆಸುವಲ್ಲಿ ಭಾರತದ ಅಪೇಕ್ಷಣೀಯ ದಾಖಲೆ ಅಭೂತಪೂರ್ವವಾಗಿ ಬೃಹತ್ ಮಟ್ಟದಲ್ಲಿ ಸಮಾನವಾಗಿ ನಿಭಾಯಿಸಲಾಗಿರುವ ಯಾಂತ್ರಿಕ ಆದರೆ ಸಮರ್ಥವಾಗಿ ಅನುಷ್ಠಾನಗೊಳಿಸಿರುವ ಪ್ರಕ್ರಿಯೆಯ ಸಾಮರ್ಥ್ಯದತ್ತ ಬೆಟ್ಟು ಮಾಡುತ್ತದೆ.

ವಿಶೇಷ ಅಗತ್ಯಗಳುಳ್ಳ ಜನರು ಆದರೆ ವಿಶೇಷ ಅಗತ್ಯಗಳುಳ್ಳ ಜನರ ಸಮಸ್ಯೆಗೆ ಸ್ಪಂದಿಸುವ ಸಮಯ ಬಂದಾಗ ಅಧಿಕಾರಶಾಹಿಯು ಒಂದು ಅಸಮರ್ಥ ಯಂತ್ರವಾಗಿ ಬಿಡುತ್ತದೆ. ಮತ್ತೆ ಇಂಥ ವಿಶೇಷ ಅಗತ್ಯವುಳ್ಳ ಜನರು ವಿಸ್ತಾರವಾದ ಪ್ರದೇಶದಲ್ಲಿ ದೊಡ್ಡ ಸಂಖ್ಯೆಗಳಲ್ಲಿ ಹರಡಿರುವಾಗ ಮತ್ತು ಈ ಎಲ್ಲ ಪ್ರದೇಶಗಳು ವಿಶೇಷ ಅಗತ್ಯಗಳ ಅವಶ್ಯಕತೆಯಿರದ ಸಾಮಾನ್ಯ ಜನರಿಂದ ಸುತ್ತುವರಿದಿರುವಾಗ ಅಧಿಕಾರಶಾಹಿ ವರ್ಗವು ಮತ್ತಷ್ಟು ಅಸಮರ್ಥ ವಾಗಿಬಿಡುತ್ತದೆ. ಈ ವಿಭಾಗದಲ್ಲಿ ಗ್ರಾಮೀಣ ಭಾಗದ ಕನಿಷ್ಠ ಮೂರು ವರ್ಗಗಳ ಜನರು ಬೀಳುತ್ತಾರೆ. ಮೊದಲನೆಯದಾಗಿ ಮತ್ತು ಈ ವಿಭಾಗದಲ್ಲಿ ಬೀಳುವ ಅತೀ ಹೆಚ್ಚಿನ ಸಂಖ್ಯೆಯ ಜನರೆಂದರೆ ಅಂಗವೈಕಲ್ಯ ಹೊಂದಿರುವವರು. ಇವರಲ್ಲಿ ಈಗ ದಿವ್ಯಾಂಗರು ಎಂದು ಕರೆಯಲ್ಪಡುವ ಮಾನಸಿಕ ಬೆಳವಣಿಗೆ ಹೊಂದಿರದವರು ಮತ್ತು ಮಾನಸಿಕ ಅಸಮತೋಲನ ಹೊಂದಿರುವವರೂ ಸೇರುತ್ತಾರೆ. ಎರಡನೆಯದಾಗಿ, ತಲೆಮಾರುಗಳಿಂದ ಅಲೆಮಾರಿಗಳಾಗಿ ಬದುಕುತ್ತಿರುವ ಮತ್ತು ಸಮಾಜದ ಅಂಚಿನಲ್ಲಿರುವ ಜನರು. ಮೂರನೆಯದಾಗಿ ಮತ್ತು ಅತ್ಯಂತ ಕನಿಷ್ಠವಾಗಿ ಕಣ್ಣಿಗೆ ಕಾಣುವವರೆಂದರೆ, ಪ್ರಮುಖವಾಗಿ ಸೂಕ್ಷ್ಮ ಬುಡಕಟ್ಟು ಗುಂಪುಗಳಿಗೆ ಸೇರಿದ ಜನರು. ಈ ವರ್ಗಗಳಲ್ಲಿ ಬರುವ ಜನರ ಕಲ್ಯಾಣಕ್ಕೆ ಸರಕಾರ ನಿಗದಿಪಡಿಸುವ ಆರ್ಥಿಕ ಸಂಪನ್ಮೂಲ ಮತ್ತು ಉದ್ದೇಶದಲ್ಲಿ ತಪ್ಪನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಆದರೆ ಅಂತಿಮವಾಗಿ ಸಿಗುವ ಫಲಿತಾಂಶ ಮಾತ್ರ ಸಮಾಧಾನಕರ ವಾಗಿರುವುದಿಲ್ಲ. ನನ್ನ ಅಭಿಪ್ರಾಯದ ಪ್ರಕಾರ, ಸಮಸ್ಯೆಯಿರುವುದು ಅಧಿಕಾರಶಾಹಿ ಯಂತ್ರದ ಮೇಲಿರುವ ಅವಲಂಬನೆಯಲ್ಲಿ. ನಮ್ಮ ಅಧಿಕಾರಶಾಹಿಯು ವಿಶೇಷ ಅಗತ್ಯದ ಜನರ ಸಮಸ್ಯೆಗೆ ಸ್ಪಂದಿಸುವ ಉದ್ದೇಶಕ್ಕಾಗಿ ರಚನೆಯಾಗಿಲ್ಲ.

ಹೊಸ ವರ್ಗೀಕರಣ

ಯುಪಿಎ ಸರಕಾರದ ಸಮಯದಲ್ಲಿ ರಾಷ್ಟ್ರೀಯ ಸಲಹಾ ಮಂಡಳಿಯ ಮುಖ್ಯಸ್ಥರ ಸೂಚನೆಯಂತೆ ಪಿವಿಟಿಜಿ ಅಂದರೆ ನಿಖರ ಸೂಕ್ಷ್ಮ ಬುಡಕಟ್ಟು ಗುಂಪಿನ ಪರಿಸ್ಥಿತಿಯ ಬಗ್ಗೆ ಗಂಭೀರವಾಗಿ ಗಮನಹರಿಸಲಾಯಿತು. ಎನ್‌ಎಸಿ ನೀಡಿದ ಸಲಹೆಯಂತೆ 2012-13ರಲ್ಲಿ ಸರಕಾರವು ನೀತಿಗಳನ್ನು ರಚಿಸಿತು. 2.7 ಮಿಲಿಯನ್ ಜನಸಂಖ್ಯೆಯ 75 ಬುಡಕಟ್ಟು ಗುಂಪುಗಳನ್ನು ಪಿವಿಟಿಜಿ ಎಂದು ವರ್ಗೀಕರಿಸಲಾಯಿತು. ಇಷ್ಟೊಂದು ಸಣ್ಣ ಪ್ರಮಾಣದಲ್ಲಿರುವ ಜನರು ದೇಶದ ವಿವಿಧ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿದ್ದಾರೆ. ಪಿವಿಟಿಜಿಗಳನ್ನು ಎನ್‌ಎಸಿ, ಕೃಷಿಪೂರ್ವ ಜೀವನಪದ್ಧತಿಯನ್ನು ಅನುಸರಿಸುವ, ಅರಣ್ಯಗಳಲ್ಲಿ ವಾಸಿಸುವ ಜನರು ಎಂದು ವ್ಯಾಖ್ಯಾನಿಸಿದೆ. ಈ ಗುಂಪುಗಳಲ್ಲಿ ಹೆಚ್ಚಾಗಿ ಪರಿಚಯವಿರುವ ಹೆಸರುಗಳೆಂದರೆ, ಪೂರ್ವ ಮಧ್ಯಪ್ರದೇಶದ ಬೈಗಾಗಳು, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಲದ ಬಿರ್‌ಹೋರ್‌ಗಳು, ಮಲ್ಕನ್‌ಗಿರಿಯ ಬೋಂಡಾ ಪರ್ವತಶ್ರೇಣಿಯ ಬೋಂಡಾಗಳು, ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ಜರವಾಗಳು, ತಮಿಳುನಾಡಿನ ಇರುಳಗಳು, ಮಹಾರಾಷ್ಟ್ರದ ಕೊಲಮಗಳು ಮತ್ತು ವಾಯುವ್ಯ ಮಧ್ಯಪ್ರದೇಶದ ಸಹರಿಯಾಗಳು. ಸಾಧ್ಯವಾದ ಕಡೆಗಳಲ್ಲಿ ಪಿವಿಟಿಜಿಗಳು ಈಗಲೂ ಅರಣ್ಯಗಳಲ್ಲೇ ಜೀವಿಸುತ್ತಾರೆ ಮತ್ತು ಪ್ರಾಚೀನಾ ಕೃಷಿ ಪದ್ಧತಿಯನ್ನು ಅನುಸರಿಸುತ್ತಾರೆ. ಆದರೆ ಹಲವೆಡೆ ಇತರ ಸಮುದಾಯಗಳ ಜನಸಂಖ್ಯೆ ಹೆಚ್ಚುತ್ತಿರುವ ಪರಿಣಾಮವಾಗಿ ದಟ್ಟಾರಣ್ಯಗಳು ನಾಶವಾಗುತ್ತಿದ್ದು ಈ ಗುಂಪಿನ ಜೀವನ ಪದ್ಧತಿಯನ್ನೇ ಸಂಕಷ್ಟದಲ್ಲಿ ಸಿಲುಕಿಸಿದೆ.

ಅಭಿವೃದ್ಧಿ ಕ್ರಮಗಳು

ಪಿವಿಟಿಜಿಗೆ ಸೇರಿದ ಜನರ ಕಲ್ಯಾಣಕ್ಕೆ ತೆಗೆದುಕೊಳ್ಳಲಾಗಿರುವ ಆಡಳಿತಾತ್ಮಕ ಕ್ರಮಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ. ಅವಿಭಜಿತ ಆಂಧ್ರಪ್ರದೇಶವು ಈ ಗುಂಪಿನ ಜನರ ಅಭಿವೃದ್ಧಿಗಾಗಿ ವಿಶೇಷ ಸಂಸ್ಥೆಗಳನ್ನು ರಚಿಸಿತ್ತು. ಮಧ್ಯಪ್ರದೇಶದಲ್ಲಿ ಜಿಲ್ಲಾ ಮಟ್ಟದ ಸಂಸ್ಥೆಗಳನ್ನು ಸ್ಥಾಪಿಸಿ ಪಿವಿಟಿಜಿಗಳ ಕಲ್ಯಾಣಕ್ಕಾಗಿ ಶ್ರಮಿಸಲಾಗುತ್ತಿದೆ. ಇತರ ಕಡೆಗಳಲ್ಲಿ ಬುಡಕಟ್ಟು ಅಭಿವೃದ್ಧಿ ಆಯುಕ್ತ ಅಥವಾ ತತ್ಸಮಾನ ಅಧಿಕಾರಿಗಳು ಈ ವರ್ಗದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಕೇಂದ್ರ ಸರಕಾರದ ಬುಡಕಟ್ಟು ಉಪ-ಯೋಜನೆಗಳ ಅಡಿಯಲ್ಲಿ ರೂಪಿಸಲಾಗುವ ಯೋಜನೆಗಳು ಮತ್ತು ನಿಧಿಗಳು ಪಿವಿಟಿಜಿಗಳಿಗೆ ಆಗಬಹುದಾದ ಲಾಭವನ್ನು ಗಮನದಲ್ಲಿಟ್ಟು ರೂಪಿಸಲಾಗಿದೆ. 2013ರಲ್ಲಿ ಸರಕಾರವು ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಯಡಿ (ಸಿಸಿಡಿ) ಸಾಂಸ್ಕೃತಿಕ ಗುರುತನ್ನು ಸಂರಕ್ಷಿಸುವ ಜೊತೆಗೆ ಬುಡಕಟ್ಟು ಜನರ ಅಭಿವೃದ್ಧಿ ನಡೆಸುವ ವಿಶೇಷ ಕಾರ್ಯವನ್ನು ಕೈಗೆತ್ತಿಕೊಂಡಿತ್ತು.

ಸಿಸಿಡಿಯು ವಾರ್ಷಿಕವಾಗಿ ಎರಡು ಬಿಲಿಯನ್ ರೂ. ವೆಚ್ಚ ಮಾಡಬಹುದಾಗಿದೆ. ಸಿಸಿಡಿ ನೀಡುವ ಹಣವನ್ನು ಯಾವ ರೀತಿ ಖರ್ಚು ಮಾಡಬೇಕು ಎಂಬ ನಿರ್ಧಾರವನ್ನು ರಾಜ್ಯಗಳು ತೆಗೆದುಕೊಳ್ಳಬೇಕು. ಆದರೆ ಸಾಮಾನ್ಯವಾಗಿ ಪಿವಿಟಿಜಿಗಳು ವಾಸವಿರುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವತ್ತ ಎಲ್ಲರ ಗಮನ ಕೇಂದ್ರೀಕರಿಸಿರುತ್ತದೆ.

ನಿರ್ಲಕ್ಷಿತ ಮತ್ತು ಸೂಕ್ಷ್ಮ

ಪಿವಿಟಿಜಿಯಲ್ಲಿ ಬರುವ ಪ್ರತಿಯೊಂದು ಗುಂಪು ಕೂಡಾ ಅಭಿವೃದ್ಧಿಯ ಸೂಚಿಯಲ್ಲಿ ಅತ್ಯಂತ ಕೆಳಗಿನ ಮಟ್ಟದಲ್ಲಿವೆ. ಅವರಲ್ಲಿ ಶಿಕ್ಷಣ ಅತ್ಯಂತ ಕಡಿಮೆಯಿದೆ, ಅಪೌಷ್ಟಿಕತೆ ಅತಿಯಾಗಿದೆ, ಆಯಸ್ಸು ಕಡಿಮೆ ಮತ್ತು ಜೀವನಮಟ್ಟ ಕಳಪೆಯಾಗಿದೆ. ಅವರನ್ನು ಅಭಿವೃದ್ಧಿಯ ಸಾಮಾನ್ಯ ಪ್ರಕ್ರಿಯೆಯಲ್ಲಿ ಸೇರಿಸುವಲ್ಲಿ ಅಡೆತಡೆಗಳಿವೆ. ಅತ್ಯಂತ ಕಡಿದಾದ ಪ್ರದೇಶಗಳಲ್ಲಿ ವಾಸಿಸುವ ಇವರು ಬಹುತೇಕವಾಗಿ ಅರಣ್ಯ ಇಲಾಖೆೆಯ ಮಿತಿಯಲ್ಲಿ ಬರುವ ಪ್ರದೇಶಗಳಲ್ಲಿ ನೆಲೆಸಿರುತ್ತಾರೆ. ಇಂಥ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ, ರಸ್ತೆ ಸಂಪರ್ಕ ಮತ್ತು ಸಂವಹನ ಅತ್ಯಂತ ಕಳಪೆಯಾಗಿರುತ್ತದೆ. ಇವರು ವಾಸಿಸುವ ಪ್ರದೇಶಗಳಲ್ಲಿ ದೇಶದ ಪ್ರತಿಷ್ಠಿತ ಮಾಧ್ಯಮಗಳು ಅಲ್ಲಿನ ವನ್ಯಜೀವಿಗಳು ಮತ್ತು ಸಸ್ಯಸಂಕುಲವನ್ನು ಸಂರಕ್ಷಿಸುವತ್ತ ಹೆಚ್ಚು ಬೆಳಕು ಚೆಲ್ಲುತ್ತಾರೆಯೇ ಹೊರತು ಪಿವಿಟಿಜಿಗಳ ಜೀವನ ಸ್ಥಿತಿಯತ್ತ ಅಲ್ಲ. ಸ್ಪರ್ಧಾತ್ಮಕ ಕಾರ್ಮಿಕ ಮಾರುಕಟ್ಟೆಯಲ್ಲಿ ಉಳಿಯಲು ಅಗತ್ಯವಿರುವ ಕಲೆ ಅಥವಾ ರಾಜಕೀಯ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಬಲ್ಲ ಜನಬಲವನ್ನು ಹೊಂದಿರದ ಕಾರಣ ಬುಡಕಟ್ಟು ಸಮುದಾಯ ಅತ್ಯಂತ ಸೂಕ್ಷ್ಮ ಗುಂಪಾಗಿ ಉಳಿದಿದೆ. ಬಹಳಷ್ಟು ಕಡೆಗಳಲ್ಲಿ ಪರಿಸರದ ಪರಿಸ್ಥಿತಿ ಮತ್ತು ಜನಸಂಖ್ಯೆಯ ಒತ್ತಡವು ಈ ಗುಂಪಿನ ವಿರುದ್ಧವಾಗಿದೆ. ಕಡಿಮೆ ವೇತನದ, ಅಧಿಕ ಶ್ರಮಪಡಬೇಕಾಗುವ ಗಣಿಗಾರಿಕೆ ಅಥವಾ ಇಟ್ಟಿಗೆ ಕಾರ್ಖಾನೆಗಳಲ್ಲಿ ದುಡಿಯಲಷ್ಟೇ ಸೀಮಿತವಾಗುವ ಮೂಲಕ ಈ ಜನರು ಜೀತದಾಳುಗಳಾಗಿ ಬದಲಾಗುತ್ತಿದ್ದಾರೆ. ಉಪನ್ಯಾಸಕ ರಂಜಿತ್ ಗುಪ್ತಾ ಸಿದ್ಧಪಡಿಸಿರುವ ವರದಿಯ ಪ್ರಕಾರ, ಬುಡಕಟ್ಟು ಜನರು ಕೇವಲ ಬದುಕುತ್ತಾರೆ, ಅಷ್ಟೇ.

ಸೂಕ್ತ ಕ್ರಮಗಳ ಅಗತ್ಯ
ಈ ವೇಳೆ ಒಂದು ಮಾತು ನೆನಪಾಗುತ್ತದೆ. ಯಾವುದೇ ಕೆಲಸವನ್ನು ಮಾಡಲು ಅದನ್ನು ನಯವಾಗಿ ನಿಭಾಯಿಸುವ ಕೈಗಳು ಅತ್ಯಂತ ಮುಖ್ಯವಾಗುತ್ತದೆ. ಬೆಳೆಕೊಯ್ಲಿನ ವಿಷಯದಲ್ಲಿ ಈ ಮಾತು ಅತ್ಯಂತ ಸೂಕ್ತವೆನಿಸುತ್ತದೆ. ಚಹಾ ಗಿಡಗಳ ಪೋಷಣೆ ಮತ್ತು ಕೊಯ್ಲಿಗೆ ಮೃದು ಕೈಗಳ ಮತ್ತು ಜಾಗೃತ ಮನಸ್ಸುಗಳ ಅಗತ್ಯವಿರುತ್ತದೆ. ಪ್ರತಿಯೊಂದು ಗಿಡಕ್ಕೂ ತನ್ನದೇ ಆದ ಆರೈಕೆ ಮತ್ತು ಪೋಷಣೆಯ ಅಗತ್ಯವಿದೆ. ನಮ್ಮ ಸರಕಾರಗಳು ಕೂಡಾ ಬುಡಕಟ್ಟು ಸಮುದಾಯದ ಉದ್ಧ್ದಾರಕ್ಕಾಗಿ ಸರಿಯಾದ ಆಡಳಿತಾತ್ಮಕ ಹೆಜ್ಜೆಗಳನ್ನು ಇಡುತ್ತದೆಯೇ ಎಂಬುದನ್ನು ಕಾದು ನೋಡಬೇಕಷ್ಟೇ.

ಕೃಪೆ: thewire.in

Writer - ಸಂಜೀವ್ ಫನ್ಸಲ್ಕರ್

contributor

Editor - ಸಂಜೀವ್ ಫನ್ಸಲ್ಕರ್

contributor

Similar News