ಏಕೆ ಮನವಿ ಮಾಡಬಾರದು?

Update: 2018-05-23 18:33 GMT

ಮಾನ್ಯರೇ,

ಚುನಾವಣೋತ್ತರ ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿರುವ ಪಕ್ಷಗಳು ಇವಿಎಂ ಅನ್ನು ದೂರುವುದು ಇತ್ತೀಚೆಗೆ ಸಹಜವಾಗಿದೆ. ಕರ್ನಾಟಕದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇದೀಗ ರಾಜಕೀಯ ನಾಯಕರೊಬ್ಬರು 30 ರಿಂದ 40 ವಿಧಾನಸಭಾ ಕ್ಷೇತ್ರಗಳಲ್ಲಿ ‘ಸೆಲೆಕ್ಟಿವ್ ಟಾಂಪರಿಂಗ್’ ಅಗಿದೆ ಎಂದು ದೂರಿದ್ದಾರೆ. ಆದರೆ ಇಂತಹ ಆರೋಪವನ್ನು ಸಾಬೀತು ಪಡಿಸುವಲ್ಲಿ ಕಾರ್ಯನಿರತರಾಗುವುದು ಮಾತ್ರ ಕಡಿಮೆ. ಏಕೆ ಹೀಗೆ? ಈ ಆರೋಪ ಸೋತ ಮನಸ್ಥಿತಿಯ ಬಡಬಡಿಕೆಯೇ? ‘ಸೆಲೆಕ್ಟಿವ್ ಟಾಂಪರಿಂಗ್’ ಎಂದು ಆರೋಪಿಸುವುದು ಚುನಾವಣೆಯ ವಿಶ್ವಾಸಾರ್ಹತೆಯನ್ನು ಕೆಣಕಿದಂತಲ್ಲವೇ? ಪ್ರತಿ ಚುನಾವಣೆಯಲ್ಲೂ ಇಂತಹ ಹೇಳಿಕೆಗಳು ಪುನರುಕ್ತಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಹೇಳಿಕೆಗಳು ಜನರಲ್ಲಿ ಗೊಂದಲ ಮೂಡಿಸಬಹುದು, ಇಲ್ಲವೆ ತಮಾಷೆ ಎನ್ನಿಸಲೂ ಬಹುದು. ಇದಕ್ಕೆ ಬದಲು ‘ಸೆಲೆಕ್ಟಿವ್ ಟಾಂಪರಿಂಗ್’ ಎಂದು ಗುರುತಿಸಿರುವ ಕ್ಷೇತ್ರಗಳ ಫಲಿತಾಂಶವನ್ನು ಅದರ ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಮಾಡಿಸುವಂತೆ ಚುನಾವಣಾ ಆಯೋಗಕ್ಕೆ ಏಕೆ ಮನವಿ ಮಾಡಬಾರದು? ಎಲ್ಲಿಯ ತನಕ ಕಾರ್ಯತ ಪರೀಕ್ಷೆ ಜರುಗುವುದಿಲ್ಲವೋ ಅಲ್ಲಿಯವರೆಗೆ ಸಂಶಯ ಬಗೆಹರಿಯದು. ಅದನ್ನೂ ಮೀರಿ ಭಿನ್ನ ತಾಂತ್ರಿಕ ದೋಷಗಳಿದ್ದರೆ, ಹೊರಗೆಡವಲು ಗಂಭೀರವಾಗಿ ಸಂಶೋಧನೆಗೆ ತೊಡಗಿಕೊಳ್ಳಲಿ. ಇವಿಎಂನ ದೋಷ ಸಾಬೀತಾದರೆ ಮತಪತ್ರಕ್ಕೆ ವಾಪಸ್ ಹೋಗಲು ಜನಾಂದೋಲನಕ್ಕೆ ಪ್ರೇರಣೆಯಾದರೂ ಆದೀತು.

Writer - -ದೊಡ್ಡಿಶೇಖರ, ಪುತ್ತೂರು

contributor

Editor - -ದೊಡ್ಡಿಶೇಖರ, ಪುತ್ತೂರು

contributor

Similar News