ವಿಶ್ವಾಸ ಮತಯಾಚನೆಗೂ ಮೊದಲೇ ಸಮ್ಮಿಶ್ರ ಸರಕಾರಕ್ಕೆ ಸ್ಪೀಕರ್ ಆಯ್ಕೆಯ ಪರೀಕ್ಷೆ

Update: 2018-05-24 12:27 GMT

ಬೆಂಗಳೂರು, ಮೇ 24: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಬಹುಮತ ಸಾಬೀತುಪಡಿಸುವ ಮೊದಲೇ ವಿಧಾನಸಭೆಯ ನೂತನ ಸ್ಪೀಕರ್ ಆಯ್ಕೆ ಒಂದು ರೀತಿಯಲ್ಲಿ ಪರೀಕ್ಷೆಯನ್ನೇ ತಂದೊಡ್ಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ.

ಗುರುವಾರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ಆರ್.ರಮೇಶ್‌ಕುಮಾರ್ ಸ್ಪೀಕರ್ ಸ್ಥಾನಕ್ಕೆ ವಿಧಾನಸಭಾ ಕಾರ್ಯದರ್ಶಿ ಮೂರ್ತಿಯವರಿಗೆ ನಾಮಪತ್ರ ಸಲ್ಲಿಸಿದ್ದು, ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಸುರೇಶ್‌ಕುಮಾರ್ ಉಮೇದುವಾರಿಕೆ ಸಲ್ಲಿಸಿದ್ದು, ಸ್ಪೀಕರ್ ಚುನಾವಣೆಯನ್ನು ರಂಗೇರಿಸಿದೆ.

ಸ್ಪೀಕರ್ ಸ್ಥಾನಕ್ಕೆ ಇಬ್ಬರು ಉಮೇದುವಾರಿಕೆ ಸಲ್ಲಿಸಿರುವುದರಿಂದ ಚುನಾವಣೆ ನಡೆಯಲಿದ್ದು, ನಾಳೆ (ಮೇ 25) ಮಧ್ಯಾಹ್ನ 12:15ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಧ್ವನಿಮತ ಅಥವಾ ಕೈಎತ್ತುವ ಮೂಲಕ ಸ್ಪೀಕರ್ ಆಯ್ಕೆ ನಡೆಯುವ ಸಾಧ್ಯತೆಗಳಿವೆ.

ಆಯ್ಕೆ ನಿಶ್ಚಿತ: ವಿಧಾನಸಭೆಯ ಈಗಿನ ಬಲಾಬಲದ ಪ್ರಕಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಬಹುಮತವಿದ್ದು, ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಕೆ.ಆರ್.ರಮೇಶ್‌ಕುಮಾರ್ ಅವರು ವಿಧಾನಸಭೆ ನೂತನ ಸ್ಪೀಕರ್ ಆಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ.

ವಿಧಾನಸಭೆಯಲ್ಲಿ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ 104 ಸದಸ್ಯ ಬಲ ಹೊಂದಿದ್ದು, ವಿಧಾನಸಭಾ ಸ್ಪೀಕರ್ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಪೈಪೋಟಿ ನೀಡಲು ಮಾಜಿ ಸಚಿವ ಎಸ್.ಸುರೇಶಕುಮಾರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ವಿಧಾನಸಭೆ ಸ್ಪೀಕರ್ ಚುನಾವಣೆಯನ್ನು ಗೆಲ್ಲುವ ಅಗತ್ಯ ಸಂಖ್ಯಾಬಲವಿಲ್ಲ. ಆದರೂ, ತನ್ನ ಅಭ್ಯರ್ಥಿಯನ್ನು ಅಖಾಡಕ್ಕಿಳಿಸುವ ಮೂಲಕ ಬಿಜೆಪಿ ರಾಜಕೀಯ ದಾಳ ಉರುಳಿಸಲು ಮುಂದಾಗಿದೆ. ಮೈತ್ರಿಕೂಟದ ಶಾಸಕರಲ್ಲಿ ಮನೆಮಾಡಿರುವ ಅಸಮಾಧಾನದ ಲಾಭ ಪಡೆಯಲು ಬಿಜೆಪಿ ರಣತಂತ್ರ ರೂಪಿಸಿದೆ. ಆದರೆ, ಸ್ಪೀಕರ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಲಾಗುತ್ತಿದೆ.

ಮೈತ್ರಿಕೂಟದ ಅಭ್ಯರ್ಥಿಯೂ ಆಗಿರುವ ಕಾಂಗ್ರೆಸ್ ಪಕ್ಷದ ಕೆ.ಆರ್.ರಮೇಶ್ ಕುಮಾರ್, ಈ ಹಿಂದೆಯೂ ವಿಧಾನಸಭೆ ಸ್ಪೀಕರ್ ಆಗಿಯೂ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಿದ ಅನುಭವ ಅವರ ಬೆನ್ನಿಗಿದೆ. ಹೀಗಾಗಿ ರಮೇಶ್ ಕುಮಾರ್ ಅವರನ್ನು ಸ್ವೀಕರ್ ಹುದ್ದೆಗೆ ಕಾಂಗ್ರೆಸ್ ಆಯ್ಕೆ ಮಾಡಿದೆ.

ರಹಸ್ಯ ಮತದಾನ ಇಲ್ಲ:

‘ಸ್ಪೀಕರ್ ಆಯ್ಕೆ ಪ್ರಕ್ರಿಯೆಯಲ್ಲಿ ರಹಸ್ಯ ಮತದಾನಕ್ಕೆ ಅವಕಾಶವಿಲ್ಲ. ಬಹಿರಂಗ ಮತದಾನದ ಮೂಲಕ ನೂತನ ಸ್ಪೀಕರ್ ಆಯ್ಕೆ ಮಾಡಲಾಗುವುದು. ಈಗಾಗಲೇ ನಾಮಪತ್ರ ಸಲ್ಲಿಸಿರುವವರ ಪ್ರಸ್ತಾವನೆಗಳನ್ನು ಮಂಡಿಸಲಾಗುವುದು. ಧ್ವನಿ ಮತ, ಕೈ ಎತ್ತಿ ಬೆಂಬಲ ಹಾಗೂ ತಮ್ಮ ಸ್ಥಾನದಲ್ಲೇ ಎದ್ದು ನಿಂತು ಸದಸ್ಯರು ಬೆಂಬಲ ಸೂಚಿಸುವ ಮೂಲಕ ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ’

-ಎಸ್.ಮೂರ್ತಿ, ವಿಧಾನಸಭೆ ಕಾರ್ಯದರ್ಶಿ

ರಮೇಶ್‌ಕುಮಾರ್ ಆಯ್ಕೆ ನಿಶ್ಚಿತ:

‘ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಕೆ.ಆರ್.ರಮೇಶ್ ಕುಮಾರ್ ಅವರು ವಿಧಾನಸಭೆ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದು, ಅವರು ಈ ಹಿಂದೆಯೂ ಸ್ಪೀಕರ್ ಆಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಹಿರಿಯ ಮುತ್ಸದ್ಧಿ. ರಮೇಶ್‌ಕುಮಾರ್ ಅವರು ಮತ್ತೆ ಸ್ಪೀಕರ್ ಆಗಿ ಆಯ್ಕೆಯಾಗಲಿದ್ದಾರೆ’

-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News