ಮಕ್ಕಳ ಕಳ್ಳನೆಂದು ವ್ಯಕ್ತಿಯ ಥಳಿಸಿ ಹತ್ಯೆಗೈದ ಪ್ರಕರಣ: 14 ಜನರ ಬಂಧನ

Update: 2018-05-24 12:47 GMT

ಬೆಂಗಳೂರು, ಮೇ 24: ಮಕ್ಕಳ ಕಳ್ಳನೆಂದು ಭಾವಿಸಿ ಯುವಕನೊಬ್ಬನನ್ನು ಥಳಿಸಿ ಹತ್ಯೆಗೈದಿರುವ ಪ್ರಕರಣ ಸಂಬಂಧ ವಿಡಿಯೋ ಆಧರಿಸಿ 14 ಜನರನ್ನು ಬಂಧಿಸಿದ್ದು, ಸುಳ್ಳು ವದಂತಿ ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ನಗರದ ಪಶ್ವಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್ ಹೇಳಿದರು.

ಗುರುವಾರ ಸುದ್ದಿಗಾರರೊಮದಿಗೆ ಮಾತನಾಡಿದ ಅವರು, ಮಕ್ಕಳ ಕಳ್ಳರ ಬಗ್ಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಆತಂಕ ಸೃಷ್ಟಿಸಿ ವೈರಲ್ ಮಾಡುವ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು ಎಂದು ತಿಳಿಸಿದರು.

ಯಾವುದೇ ಮಕ್ಕಳ ಕಳ್ಳರ ಗುಂಪು ನಗರಕ್ಕೆ ಕಾಲಿಟ್ಟಿಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದ ಅವರು, ವಿನಾಕಾರಣ ವಾಟ್ಸಾಪ್ ಸಂದೇಶಗಳ ರವಾನೆಯಿಂದ ನಾಗರಿಕರಲ್ಲಿ ಆತಂಕ ಉಂಟಾಗುತ್ತಿದೆ. ಹೀಗಾಗಿ ಸುಳ್ಳು ವದಂತಿಗಳನ್ನು ಹಬ್ಬಿಸುವ ಸಂದೇಶಗಳನ್ನು ರವಾನಿಸುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದರು.

ಬುಧವಾರ ಮಕ್ಕಳ ಕಳ್ಳನೆಂದು ಭಾವಿಸಿ ಚಾಮರಾಜಪೇಟೆಯಲ್ಲಿ ಕಾಲುರಾಮ್ ಬಚ್ಚನ್‌ರಾಮ್(26) ಎಂಬಾತನನ್ನು ಥಳಿಸಿ ಕೊಲೆ ಮಾಡಲಾಗಿದೆ. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಕಾಟನ್‌ಪೇಟೆ, ಚಾಮರಾಜಪೇಟೆ ಪೊಲೀಸರು 14 ಜನರನ್ನು ಬಂಧಿಸಿ, ವಿಚಾರಣೆ ತೀವ್ರಗೊಳಿಸಲಿದ್ದು, ಇನ್ನಷ್ಟು ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.

ಏನಿದೆ ಪ್ರಕರಣ: ರಾಜಸ್ತಾನ ಮೂಲದ ಕಾಲುರಾಮ್ ಬಚ್ಚರಾಮ್, ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಲ್ಲಿನ ಚಾಮರಾಜಪೇಟೆಯ ಪೆನ್‌ಷನ್ ಮೊಹಲ್ಲಾದ ರಸ್ತೆಯ ರಂಗನಾಥ್ ಟಾಕೀಸ್ ಹತ್ತಿರ ಮಕ್ಕಳನ್ನು ಮಾತನಾಡಿಸಿದ್ದಾರೆ. ಇದನ್ನು ನೋಡಿದ ಕೆಲ ಸ್ಥಳೀಯರು ಮಕ್ಕಳ ಕಳ್ಳನೆಂದು ಭಾವಿಸಿ ಗಂಭೀರವಾಗಿ ಹಲ್ಲೆ ನಡೆಸಿದ ಪರಿಣಾಮ ಕುಸಿದು ಬಿದ್ದಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News