×
Ad

ಮೈತ್ರಿ ಸರಕಾರದ ವಿಚಾರದಲ್ಲಿ ಬಿಎಸ್‌ವೈ ಮೂಗು ತೂರಿಸುವುದು ಬೇಡ: ಡಿಸಿಎಂ ಡಾ.ಜಿ.ಪರಮೇಶ್ವರ್

Update: 2018-05-24 18:31 IST

ಬೆಂಗಳೂರು, ಮೇ 24: ‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ವಿಚಾರದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ. ಅವರು ತಮ್ಮ ಪಕ್ಷದಲ್ಲಿನ ವಿಚಾರಗಳನ್ನು ನೋಡಿಕೊಂಡಿರಲಿ’ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಹಾಗೂ ನನ್ನ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಿನ್ನೆ ಸುದ್ಧಿಗೋಷ್ಠಿಯಲ್ಲಿ ಕುಮಾರಸ್ವಾಮಿ ಯಾವುದೇ ಕಾರ್ಯಕ್ರಮ ಅಥವಾ ಯೋಜನೆಗಳನ್ನು ಪ್ರಕಟಿಸಿಲ್ಲ. ಬದಲಿಗೆ ರಾಜ್ಯದ ಜನತೆ, ಜೆಡಿಎಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಪಕ್ಷ ಮುಖಂಡರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನನ್ನ ಬಳಿ ಚರ್ಚಿಸಿಯೇ ಅವರು ಸುದ್ಧಿಗೋಷ್ಠಿ ನಡೆಸಿದ್ದು. ಆದರೆ, ಈ ಬಗ್ಗೆ ಬಿಎಸ್‌ವೈ ಆಕ್ಷೇಪ ವ್ಯಕ್ತಪಡಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಅಪ್ರಸ್ತುತ: ‘ಅವರಪ್ಪನಾಣೆಗೂ ಎಚ್‌ಡಿಕೆ ಸಿಎಂ ಆಗಲ್ಲ ಎಂಬ ಸಿದ್ದರಾಮಯ್ಯರ ಹೇಳಿಕೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದು, ಆ ಹೇಳಿಕೆ ಇದೀಗ ಅಪ್ರಸ್ತುತ. ದೇವೇಗೌಡರ ಪತ್ನಿ ಚನ್ನಮ್ಮ ‘ಸಿದ್ದರಾಮಯ್ಯನವರನ್ನು ಕ್ಷಮಿಸುವುದಿಲ್ಲ’ ಎಂದು ಯಾವ ಕಾರಣಕ್ಕಾಗಿ ಹೇಳಿದ್ದಾರೋ ನನಗೆ ಗೊತಿಲ್ಲ ಎಂದರು.

ಮೈತ್ರಿ ಸರಕಾರ ರಚನೆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷ ಕೆಲ ನಿಬಂಧನೆಗಳನ್ನು ಹಾಕಿಕೊಂಡಿದ್ದು, ಅದರ ಪ್ರಕಾರವೇ ನಾವು ನಡೆದುಕೊಳ್ಳುತ್ತೇವೆ. ಸಮ್ಮಿಶ್ರ ಸರಕಾರ ಐದು ವರ್ಷ ಪೂರ್ಣಾವಧಿ ಆಡಳಿತ ಪೂರೈಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಾಳೆ(ಮೇ 25) ನಾವು ಬಹುಮತ ಸಾಬೀತುಪಡಿಸಲಿದ್ದೇನೆ ಎಂದ ಅವರು, ಖಾತೆ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡರೆಲ್ಲರೂ ಕೂತು ನಿರ್ಧಾರ ಮಾಡುತ್ತೇವೆ. ಕಳಂಕಿತರಿಗೆ ಖಾತೆ ನೀಡುವ ಬಗ್ಗೆ, ಜನರೇ ಆಯ್ಕೆ ಮಾಡಿ ಕಳುಹಿಸಿದ ಬಳಿಕ ಈ ಪ್ರಶ್ನೆ ಅಪ್ರಸ್ತುತ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News