ನೂತನ ಸಿಎಂ ಎಚ್‌ಡಿಕೆಯಿಂದ ನಾಳೆ ವಿಶ್ವಾಸ ಮತಯಾಚನೆ: ಸವಾಲಿನ ಅಧಿವೇಶನ ಕಲಾಪದತ್ತ ಎಲ್ಲರ ಚಿತ್ತ
ಬೆಂಗಳೂರು, ಮೇ 24: ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ನಾಳೆ(ಮೇ 25) ಬಹುಮತ ಸಾಬೀತುಪಡಿಸುವ ಸವಾಲು ಎದುರಾಗಿದ್ದು, ರಾಜ್ಯ ಹಾಗೂ ದೇಶದ ಜನರ ಚಿತ್ತ ನಾಳಿನ ವಿಧಾನಸಭೆ ಅಧಿವೇಶದತ್ತ ನೆಟ್ಟಿದೆ.
ನಾಳೆ ಮಧ್ಯಾಹ್ನ 12:15ಕ್ಕೆ ವಿಧಾನಸಭೆ ಅಧಿವೇಶನ ಕಲಾಪ ಆರಂಭಗೊಳ್ಳಲಿದ್ದು, ಮೊದಲಿಗೆ ವಿಧಾನಸಭೆ ನೂತನ ಸ್ಪೀಕರ್ ಆಯ್ಕೆ ಸಂಬಂಧ ಚುನಾವಣೆ ನಡೆಯಲಿದೆ. ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯ ಕಲಾಪ ನಡೆಸಿಕೊಡಲಿದ್ದು, ಈಗಾಗಲೇ ಉಮೇದುವಾರಿಕೆ ಸಲ್ಲಿಸಿರುವ ಬಿಜೆಪಿಯ ಸುರೇಶ್ ಕುಮಾರ್ ಮತ್ತು ಮೈತ್ರಿಕೂಟದ ಅಭ್ಯರ್ಥಿ ಕೆ.ಆರ್.ರಮೇಶ್ ಕುಮಾರ್ ಪ್ರಸ್ತಾವವನ್ನು ಮತಕ್ಕೆ ಹಾಕುವ ಸಾಧ್ಯತೆಗಳಿವೆ.
ಮೇ 15ರ ವಿಧಾನಸಭೆ ಚುನಾವಣಾ ಫಲಿತಾಂಶದ ನಂತರ ನೂತನ ಸರಕಾರ ರಚನೆ ಕಸರತ್ತು, ಶಾಸಕರ ಕುದುರೆ ವ್ಯಾಪಾರಕ್ಕೆ ಯತ್ನ, ರೆಸಾರ್ಟ್ ಯಾತ್ರೆ ಬಳಿಕ ಬಿಜೆಪಿಯ ಯಡಿಯೂರಪ್ಪ ಮೇ 17ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಮೂರೇ ದಿನಗಳಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ರಾಜೀನಾಮೆ ನೀಡಿದ್ದರು.
ಆ ಬಳಿಕವೂ ಕಾಂಗ್ರೆಸ್-ಜೆಡಿಎಸ್ ಶಾಸಕರ ಖರೀದಿ ಭೀತಿಯಿಂದ ಉಭಯ ಪಕ್ಷಗಳ ಶಾಸಕರು ರೆಸಾರ್ಟ್‌ನಲ್ಲೆ ವಾಸ್ತವ್ಯಹೂಡಿದ್ದರು. ಈ ಮಧ್ಯೆ ನೂತನ ಸಿಎಂ ಆಗಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿದೆ.
ಬಿಜೆಪಿ-104, ಕಾಂಗ್ರೆಸ್-78, ಜೆಡಿಎಸ್-37 ಹಾಗೂ ಪಕ್ಷೇತರರು-2 ಸ್ಥಾನಗಳಲ್ಲಿ ಆಯ್ಕೆಯಾಗಿದ್ದು, ನೂತನ ಸ್ಪೀಕರ್ ಆಯ್ಕೆ ಹಾಗೂ ರಾಜ್ಯ ಸರಕಾರದ ಸರಳ ಬಹುಮತಕ್ಕೆ 111 ಸ್ಥಾನಗಳ(ಶಾಸಕರ) ಅಗತ್ಯವಿದೆ. ಕಾಂಗ್ರೆಸ್-78, ಜೆಡಿಎಸ್-37(ಮೈತ್ರಿಕೂಟ) ಸೇರಿದರೆ ಒಟ್ಟು 115 ಶಾಸಕರ ಸಂಖ್ಯಾಬಲವಿದ್ದು, ಬಹುಮತ ಪಡೆಯುವ ಸ್ಪಷ್ಟ ನಿರೀಕ್ಷೆಯಿದೆ.
ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ವಿಶ್ವಾಸಮತಯಾಚನೆ ವೇಳೆ ಸರಳ ಬಹುಮತ ದೊರೆಯಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ಪಕ್ಷೇತರ ಶಾಸಕರಿಬ್ಬರ ಬೆಂಬಲವೂ ಮೈತ್ರಿಕೂಟ ಸರಕಾರಕ್ಕಿದೆ. ಈ ನಡುವೆ ಆಪರೇಷನ್ ಕಮಲದ ಆತಂಕದ ಹಿನ್ನೆಲೆಯಲ್ಲಿ ಮೂರು ಪಕ್ಷಗಳು ತಮ್ಮ ಶಾಸಕರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ‘ವಿಪ್’ ಜಾರಿಗೊಳಿಸಿವೆ.
ನೂತನ ಸ್ಪೀಕರ್ ಆಯ್ಕೆ ಬಳಿಕ ವಿಶ್ವಾಸ ಮತಯಾಚನೆಗೆ ಅಧಿಕೃತ ವಿರೋಧ ಪಕ್ಷವಾಗಿರುವ ಬಿಜೆಪಿ ಕಲಾಪ ಬಹಿಷ್ಕರಿಸುವ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಈ ಬೆಳವಣಿಗೆಗಳ ಮಧ್ಯೆ ಡಿಸಿಎಂ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಡಿ.ಕೆ.ಶಿವಕುಮಾರ್ ಇಂಧನ ಖಾತೆಯೊಂದಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ತಮ್ಮ ಪಟ್ಟು ಮುಂದುವರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ನಾಳಿನ ಬಹುಮತ ಸಾಬೀತುಪಡಿಸುವ ಅಧಿವೇಶನ ಕಲಾಪ ತೀವ್ರ ಕುತೂಹಲ ಕೆರಳಿಸಿದೆ.