ರೈತರ ಸಾಲಮನ್ನಾ ಮಾಡಲು ಆಗದಿದ್ದರೆ ಕುರ್ಚಿ ಬಿಡಿ: ಶಾಸಕ ಬಿ.ಶ್ರೀರಾಮುಲು

Update: 2018-05-24 13:56 GMT

ಬಳ್ಳಾರಿ, ಮೇ 24: ’ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಹುಮತದ ಮಾತುಬಿಟ್ಟು ರಾಜ್ಯದಲ್ಲಿನ ರೈತರ ಸಾಲಮನ್ನಾ ಮಾಡಬೇಕು. ಇಲ್ಲವಾದರೆ ಅವರು ಕೂಡಲೇ ಕುರ್ಚಿ ಬಿಟ್ಟು ತೊಲಗಲಿ’ ಎಂದು ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ಒತ್ತಾಯಿಸಿದ್ದಾರೆ.

ಗುರುವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತ್ತೆ ಆಪರೇಷನ್ ಕಮಲದ ಪ್ರಸ್ತಾಪವಿಲ್ಲ. ಬಿಜೆಪಿಗೆ 104 ಸ್ಥಾನಗಳು ಸಿಕ್ಕರೂ ನಮಗೆ ಅಧಿಕಾರ ದಕ್ಕಲಿಲ್ಲ. ಆದರೂ, ಅಧಿಕಾರಕ್ಕಾಗಿ ಬೇರೆ ಪಕ್ಷಗಳ ಶಾಸಕರನ್ನು ಕರೆತರಲು ನಮಗೆ ಆಸಕ್ತಿ ಇಲ್ಲ. ಅದು ನಮಗೆ ಬೇಕಾಗಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಮೋದಿ ಮಣಿಸಲು ಆಗದು: ಸಿಎಂ ಪ್ರಮಾಣ ವಚನ ಸ್ವೀಕರಿದ್ದಕ್ಕೆ ಕಾಂಗ್ರೆಸ್ ಏಕೆ ಬೀಗುತ್ತಿತ್ತು ಎಂದು ಗೊತ್ತಾಗುತ್ತಿಲ್ಲ. ಏಕೆಂದರೆ ಅದು ಜೊತೆ ಸೇರಿಕೊಂಡಿರುವ ತೃತೀಯ ರಂಗ ಸದಾ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತಾ ಬೆಳೆದಿದೆ ಎಂದು ಹೇಳಿದರು.

ತೃತೀಯ ರಂಗದಲ್ಲಿ ಕಾಂಗ್ರೆಸ್ ಇಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇವರೆಲ್ಲರೂ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಮಣಿಸಬೇಕೆಂದುಕೊಂಡಿದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದು ನುಡಿದರು.

ತೃತೀಯ ರಂಗದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಇಲ್ಲ. ಅದೇನಿದ್ದರೂ ಪ್ರಾದೇಶಿಕಕ್ಕೆ ಸೀಮಿತ. ಈ ರಂಗದ ಪಕ್ಷಗಳಿಗೆ ಬದ್ಧತೆ ಇಲ್ಲ. ಈ ಪಕ್ಷಗಳ ಮುಖಂಡರೆಲ್ಲರೂ ಮೋದಿಯಿಂದ ಸೋತವರು ಎಂದ ಅವರು, ಕಪ್ಪುಹಣ ವಶಪಡಿಸಿಕೊಂಡು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಜಮಾ ಮಾಡುವ ಮೋದಿ ಭರವಸೆಯನ್ನು, ರೈತರ ಸಾಲಮನ್ನಾಕ್ಕೆ ಹೋಲಿಸುವುದು ಸಲ್ಲ ಎಂದು ಆಕ್ಷೇಪಿಸಿದರು.

ಈಗಾಗಲೇ ಬಳ್ಳಾರಿ ಲೋಕಸಭೆ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಅಂಗೀಕಾರಗೊಂಡಿದೆ. ಉಪ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವಂತೆ ವರಿಷ್ಠರು ಹೇಳಿದರೆ ಸ್ಪರ್ಧಿಸಲೇಬೇಕಾಗುತ್ತದೆ. ಉಪ ಚುನಾವಣೆ ಎದುರಿಸಬೇಕೆಂದು ನನ್ನ ಹಣೆಯಲ್ಲಿ ಬರೆದಿದ್ದರೆ ಏನು ಮಾಡಲು ಸಾಧ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News