ರಾಜರಾಜೇಶ್ವರ ನಗರ ಕ್ಷೇತ್ರ ಚುನಾವಣೆ: ಕೇಂದ್ರ ಮೀಸಲು ಪಡೆ ನಿಯೋಜನೆಗೆ ಬಿಜೆಪಿ ಒತ್ತಾಯ
ಬೆಂಗಳೂರು, ಮೇ 24: ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಕುಕೃತ್ಯಗಳಿಗೆ ಸ್ಥಳೀಯ ಅಧಿಕಾರಿಗಳು ಕುಮ್ಮಕ್ಕು ನೀಡುವ ಸಾಧ್ಯತೆ ಇದೆ. ಹೀಗಾಗಿ ಹೊರಗಿನ ಅಧಿಕಾರಿಗಳನ್ನು ನಿಯೋಜಿಸಬೇಕು. ಭದ್ರತೆಗೆ ಕೇಂದ್ರ ಮೀಸಲು ಪಡೆಯನ್ನು ನಿಯೋಜಿಸಬೇಕೆಂದು ಬಿಜೆಪಿ, ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಗುರುವಾರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದ ನಿಯೋಗ, ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದು, ಮತದಾರರ ಗುರುತಿನ ಚೀಟಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ನಕಲಿ ಮತದಾರರು ಮತದಾನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಕೋರಿದ್ದಾರೆ.
ಮೇ 28ರಂದು ಮತದಾನ ನಡೆಯಲಿದ್ದು, ಈ ವೇಳೆ ಗಲಭೆ, ಗೂಂಡಾಗಿರಿ ಮತ್ತು ಮತದಾರರಿಗೆ ಬೆದರಿಕೆವೊಡ್ಡುವ ಸಾಧ್ಯತೆಗಳಿವೆ. ಆದುದರಿಂದ ಬಿಗಿ ಬಂದೋಬಸ್ತ್ ಕಲ್ಪಿಸಬೇಕು. ಕ್ಷೇತ್ರದ ಎಲ್ಲ ಮತಗಟ್ಟೆಗಳನ್ನು ಸೂಕ್ಷ್ಮವೆಂದು ಪರಿಗಣಿಸಿ ಪ್ರತಿಯೊಂದು ಮತಗಟ್ಟೆಯಲ್ಲಿ ವಿಡಿಯೋ ಚಿತ್ರಿಕರಣ ಮಾಡಬೇಕು ಎಂದು ಆಗ್ರಹಿಸಿದೆ.