×
Ad

ಮಕ್ಕಳ ಸಾಹಿತಿಗಳ ಕೈಪಿಡಿ ಹೊರಬರಲಿ: ಡಾ.ರಾಜೇಂದ್ರ ಎಸ್.ಗಡಾದ

Update: 2018-05-24 19:52 IST

ಬೆಂಗಳೂರು, ಮೇ 24: ರಾಜ್ಯದಲ್ಲಿರುವ ಮಕ್ಕಳ ಸಾಹಿತಿಗಳನ್ನು ಪರಿಚಯಿಸುವಂತಹ ಮಕ್ಕಳ ಸಾಹಿತ್ಯ ಕೈಪಿಡಿ ಹೊರತರಬೇಕಾದ ಅಗತ್ಯವಿದೆ ಎಂದು ಮಕ್ಕಳ ಸಾಹಿತಿ ಡಾ.ರಾಜೇಂದ್ರ ಎಸ್.ಗಡಾದ ಅಭಿಪ್ರಾಯಿಸಿದರು.

ಗುರುವಾರ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ’ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ವಿವಿಧೆಡೆ ಹರಡಿಕೊಂಡಿರುವ ಮಕ್ಕಳ ಸಾಹಿತಿಗಳ ಕುರಿತು ಪರಿಚಯವಿರುವ ಕೈಪಿಡಿಯನ್ನು ಹೊರ ತರಬೇಕು. ಇದರಿಂದ ಇತರೆ ಮಕ್ಕಳಿಗೂ ಸಾಹಿತ್ಯದ ಕುರಿತು ಆಸಕ್ತಿಯನ್ನು ಮೂಡಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಯೋಜನೆಯೊಂದನ್ನು ರೂಪಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದರು.

ಮಕ್ಕಳ ಸಾಹಿತಿಗಳ ಕೈಪಿಡಿಯ ಜೊತೆಗೆ ಮಕ್ಕಳ ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿರುವ ಮಕ್ಕಳ ಸಾಹಿತ್ಯ, ಸಾಂಸ್ಕೃತಿಕ ಸಂಘಟಕರ ಹೆಸರು ಹಾಗೂ ಸಂಸ್ಥೆಗಳ ಕುರಿತು ಮಾಹಿತಿ ನೀಡುವ ಕೈಪಿಡಿ ಹೊರಬರಬೇಕು. ಹಾಗೂ ಮಕ್ಕಳಿಗೆ ಮೀಸಲಾಗಿರುವ ಗ್ರಾಮೀಣ ಆಟಗಳು ಹಾಗೂ ಜಾನಪದ ಹಾಡು, ಕತೆಗಳನ್ನು ಸಂಗ್ರಹಿಸುವಂತಹ ಕೆಲಸವಾಗಬೇಕಿದೆ ಎಂದು ಅವರು ಆಶಿಸಿದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ವೇದವ್ಯಾಸ ಕೌಲಗಿ ಮಾತನಾಡಿ, ಪ್ರತಿಯೊಬ್ಬ ಮಕ್ಕಳಲ್ಲಿಯೂ ವಿಶೇಷ ಪ್ರತಿಭೆಗಳಿರುತ್ತವೆ. ಆದರೆ, ಅದನ್ನು ಸಹಜವಾಗಿ ಬೆಳೆಯಲು ಅವಕಾಶ ಮಾಡಿಕೊಡುವ ವಾತಾವರಣವನ್ನು ಕಲ್ಪಿಸಬೇಕಾದದ್ದು ನಮ್ಮ ಕರ್ತವ್ಯ. ಹೀಗಾಗಿ ಮಕ್ಕಳ ಪ್ರತಿಭೆಗಳು ಅರಳುವಿಕೆಗೆ ಪೋಷಕರು ಹಾಗೂ ನೆರೆಹೊರೆಯವರ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಬಾಲ ಭವನ ಪ್ರಶಸ್ತಿ, ಚಿಣ್ಣರ ಚಂದಿರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತ್‌ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್‌ನ ಅಧ್ಯಕ್ಷ ರಮೇಶ್ ಸುರ್ವೆ, ಚಿಪ್ಪಲಕಟ್ಟಿ ಮಠದ ಕಲ್ಮೇಶ್ವರ ಸ್ವಾಮೀಜಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News