ಬೆಂಗಳೂರು ವ್ಯಾಪ್ತಿಯಲ್ಲಿ ಡೆಂಗ್, ಮಲೇರಿಯಾ, ನಿಪ್ಹಾ ತಡೆಗೆ ಸೂಕ್ತ ಕ್ರಮ: ಜಿಲ್ಲಾಧಿಕಾರಿ ಕೆ.ಎ.ದಯಾನಂದ
ಬೆಂಗಳೂರು, ಮೇ 24: ಬೆಂಗಳೂರು ವ್ಯಾಪ್ತಿಯಲ್ಲಿ ಡೆಂಗ್, ಮಲೇರಿಯಾ ಸೇರಿದಂತೆ ನಿಪ್ಹಾ ರೋಗಗಳ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ತಿಳಿಸಿದರು.
ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೇ, ಜೂನ್, ಜುಲೈ ತಿಂಗಳುಗಳಲ್ಲಿ ಡೆಂಗ್, ಮಲೇರಿಯಾ ರೋಗಗಳು ಹರಡುವುದು ಸಾಮಾನ್ಯವಾಗಿದೆ. ಇದರ ಜೊತೆಗೆ ನಿಪ್ಹಾ ವೈರಸ್ ಹರಡುವ ಭೀತಿಯಿದೆ. ಈ ರೋಗಗಳ ತಡೆಗೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಡೆಂಗ್ ಹಾಗೂ ಮಲೇರಿಯಾವು ಅನುಪಯುಕ್ತ ಟೈರ್‌ಗಳು, ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಹರಡುತ್ತವೆ. ಹೀಗಾಗಿ ಮನೆಯ ಸುತ್ತಮುತ್ತ ಶುಚಿತ್ವ ಕಾಪಾಡುಕೊಳ್ಳುವುದಕ್ಕೆ ಆದ್ಯತೆ ಕೊಡುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಜನವರಿಯಿಂದ ಎಪ್ರಿಲ್‌ವರೆಗೆ 12 ಶಂಕಿತ ಡೆಂಗ್ ಪ್ರಕರಣಗಳಲ್ಲಿ 6 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, 4 ಖಚಿತ ಡೆಂಗ್ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಸಹಾಯಕರು ಎಪ್ರಿಲ್‌ವರಗೆ 5,57,563 ಮನೆಗಳಲ್ಲಿ ಈಡಿಸ್ ಲಾರ್ವ ಸಮೀಕ್ಷೆ ನಡೆಸಿದ್ದು, 19,204 ನೀರು ಸಂಗ್ರಾಹಕ ಸ್ಥಳಗಳಲ್ಲಿ ಈಡಿಸ್ ಲಾರ್ವ ಉತ್ಪತ್ತಿ ತಾಣವನ್ನು ನಾಶ ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನಿಪ್ಹಾ ಕುರಿತು ಜಾಗೃತಿ: ಕೇರಳದಲ್ಲಿ ನಿಪ್ಹಾ ವೈರಸ್‌ನಿಂದ ಸಾವು ನೋವು ಕಾಣಿಸಿಕೊಂಡಿದ್ದರಿಂದ ರಾಜ್ಯದಲ್ಲಿ ಈ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಬೆಂಗಳೂರು ವ್ಯಾಪ್ತಿಗೆ ಬರುವ ಪಶುಸಂಗೋಪನೆ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸಾರಿಗೆ ಇಲಾಖೆ, ಬಿಬಿಎಂಪಿ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ನಿಪ್ಹಾ ತಡೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದ್ದೇನೆಂದು ತಿಳಿಸಿದರು.
ನಿಪ್ಹಾ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು
-ಹಂದಿ ಸಾಕಾಣಿಕೆ, ಮಾಂಸದಂಗಡಿಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು.
-ಪ್ರಾಣಿಗಳಲ್ಲಿ ನಿಪ್ಹಾ ಲಕ್ಷಣಗಳು ಕಂಡು ಬಂದ ತಕ್ಷಣ, ಆ ಪ್ರಾಣಿಯನ್ನು ಪ್ರತ್ಯೇಕಿಸಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದು.
-ಕೇರಳಕ್ಕೆ ಪ್ರಯಾಣಿಸುವ ಬಸ್‌ಗಳ ಚಾಲಕ ಹಾಗೂ ನಿರ್ವಾಹಕರ ಆರೋಗ್ಯ ತಪಾಸಣೆ ನಡೆಸುವುದು.
-ಶಾಲಾ ವಿದ್ಯಾರ್ಥಿಗಳು ಪ್ರಾಣಿ-ಪಕ್ಷಿಗಳು ತಿಂದಿರುವ ಹಣ್ಣುಗಳನ್ನು ಸೇವಿಸದಂತೆ ಎಚ್ಚರಿಕೆ ವಹಿಸುವುದು.
-ಕೇರಳದಿಂದ ಇಲ್ಲಿಗೆ ಬರುವ ಜನತೆಯ ಆರೋಗ್ಯದ ಮೇಲೆ ನಿಗಾ ವಹಿಸುವುದು.
-ಯಾವುದೆ ರೀತಿಯ ಜ್ವರಕ್ಕೆ ನಿರ್ಲಕ್ಷ ಬೇಡ.ಡೆಂಗ್ ತಡೆಗೆ ಕೈಗೊಳ್ಳುವ ಕ್ರಮಗಳು
-ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು.
-ಅನುಪಯುಕ್ತ ವಸ್ತುಗಳಾದ ಪ್ಲಾಸ್ಟಿಕ್ ಮತ್ತು ಟೈರ್ ವಸ್ತುಗಳು ಇರದಂತೆ ಜಾಗ್ರತೆ ವಹಿಸುವುದು.
-ಲಾರ್ವ ಉತ್ಪತ್ತಿ ತಾಣಗಳ ಕುರಿತು ಆರೋಗ್ಯ ಇಲಾಖೆ ಮಾಹಿತಿ ನೀಡುವುದು.
-ಲಾರ್ವ ಉತ್ಪತ್ತಿ ತಾಣಗಳಲ್ಲಿ ಲಾರ್ವಾಹಾರಿ ಮೀನುಗಳನ್ನು ಬಿಡುವುದು.
-ಜನತೆಯಲ್ಲಿ ಶುಚಿತ್ವ ಕುರಿತು ಮಾಹಿತಿ ನೀಡುವುದು.