ಮೇ 30,31 ರಂದು ಅಖಿಲ ಭಾರತ ಬ್ಯಾಂಕ್ ನೌಕರರ ಮುಷ್ಕರಕ್ಕೆ ಕರೆ

Update: 2018-05-24 14:47 GMT

ಬೆಂಗಳೂರು, ಮೇ 24: ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಮೇ 30, 31 ರಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ವತಿಯಿಂದ ‘ಅಖಿಲ ಭಾರತ ಬ್ಯಾಂಕ್ ಮುಷ್ಕರ’ಕ್ಕೆ ಕರೆ ನೀಡಿದೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂನಿಯನ್ ಮುಖಂಡ ಶ್ರೀನಿವಾಸ್, ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಯುಎಫ್‌ಬಿ ಜೊತೆ ಅನೇಕ ಸುತ್ತಿನ ದ್ವಿಪಕ್ಷೀಯ ಮಾತುಕತೆ ನಡೆಸಿದರೂ ಸಹ ಇಂಡಿಯನ್ ಬ್ಯಾಂಕ್ ಅಸೋಷಿಯೇಷನ್ ವೇತನ ಪರಿಷ್ಕರಣೆ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ, ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು.

ಹಿಂದಿನ ಹತ್ತು ವರ್ಷಗಳಲ್ಲಿ ಬ್ಯಾಂಕುಗಳ ಶೇ.70 ರಷ್ಟು ಲಾಭ ಅನುತ್ಪಾದಕ ಸಾಲಗಳಿಗೆ ಪೋಲಾಗಿದೆ. ಬ್ಯಾಂಕುಗಳ ಈ ಸ್ಥಿತಿಗೆ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ಕಾರಣರಲ್ಲ. ಹೀಗಾಗಿ, ಉಚಿತ ವೇತನ ಪರಿಷ್ಕರಣೆ ನಿರಾಕರಿಸುವುದು ನ್ಯಾಯ ಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ 5 ವರ್ಷಗಳಲ್ಲಿ ಬ್ಯಾಂಕ್ ವ್ಯಾಪಾರ ವಹಿವಾಟು ಗಣನೀಯವಾಗಿ ಏರಿಕೆಯಾಗಿದೆ. ಆದರೆ, ಒಟ್ಟು ಖರ್ಚಿನ ಶೇಕಡಾವಾರು ತುಲನೆಯಲ್ಲಿ ಸಿಬ್ಬಂದಿ ವೇತನ ಶೇ.13.72 ರಿಂದ ಶೇ.10.81ಕ್ಕೆ ಇಳಿಕೆಯಾಗಿರುವುದೇಕೆ ಎಂದು ಪ್ರಶ್ನಿಸಿದ ಅವರು, ಹಣದುಬ್ಬರ ಏರಿಕೆಯಾಗಿದ್ದರೂ ಸಹ ಅಧಿಕಾರಿ ಮತ್ತು ನೌಕರರ ವೇತನ ಪ್ರಮಾಣದಲ್ಲಿ ಕಡಿತ ಮಾಡುವುದು ಸರಿಯಲ್ಲ. ಹೀಗಾಗಿ, ವೇತನ ಪರಿಷ್ಕರಣೆಗೆ ಒತ್ತಾಯಿಸಿ ಎರಡು ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News