ಶಾಸಕ ಸಿದ್ದು ಬಿ. ನ್ಯಾಮಗೌಡಗೆ ಸಚಿವ ಸ್ಥಾನ ನೀಡಲು ಆಗ್ರಹ
ಬೆಂಗಳೂರು, ಮೇ 24: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ಜಮಖಂಡಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಗಾಣಿಗ ಸಮುದಾಯದ ಶಾಸಕ ಸಿದ್ದು ಬಿ. ನ್ಯಾಮಗೌಡಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಅಖಿಲ ಭಾರತ ಗಾಣಿಗ ಸಂಘ ಒತ್ತಾಯಿಸಿದೆ.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಅಮರಗೊಂಡಪ್ಪಮೇಟಿ, ರಾಜ್ಯದಲ್ಲಿ 40 ಲಕ್ಷಕ್ಕೂ ಅಧಿಕ ಗಾಣಿಗ ಸಮುದಾಯದ ಜನಸಂಖ್ಯೆ ಇದೆ. 25 ವಿಧಾನಸಭಾ ಕ್ಷೇತ್ರಗಳಲ್ಲಿ ಗಾಣಿಗ ಸಮುದಾಯದವರು ನಿರ್ಣಾಯಕ ಮತದಾರರಾಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಇದುವರೆಗೂ ಗಾಣಿಗ ಸಮುದಾಯ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಸರಕಾರದ ಆಡಳಿತದಲ್ಲಿ ಗಾಣಿಗ ಸಮುದಾಯದ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಗಾಣಿಗ ಸಮುದಾಯದ ಇಬ್ಬರು ಶಾಸಕರಿದ್ದರೂ ಸಹ ಅವರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಅಲ್ಲದೇ, ನಿಗಮಮಂಡಳಿ ನೇಮಕಾತಿಯಲ್ಲೂ ಸೂಕ್ತ ಪ್ರಾತಿನಿಧ್ಯ ನೀಡಲಿಲ್ಲವೆಂದು ಗಾಣಿಗ ಸಮುದಾಯಕ್ಕೆ ಅಸಮಾಧಾನವಿದೆ. ಹೀಗಾಗಿ, ಗಾಣಿಗ ಸಂಘದ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಜಮಖಂಡಿ ಶಾಸಕ ಸಿದ್ದು ಬಿ. ನ್ಯಾಮಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅವರಗೊಂಡಪ್ಪ, ಮಲ್ಲಿಕಾರ್ಜುನ ನೋಣಿ, ಸೇರಿ ಪ್ರಮುಖರಿದ್ದರು.