ಬೆಂಗಳೂರು: ತೂತುಕುಡಿ ಗೋಲಿಬಾರ್ ಖಂಡಿಸಿ ಎಸ್‌ಯುಸಿಐ(ಸಿ) ಪ್ರತಿಭಟನೆ
ಬೆಂಗಳೂರು, ಮೇ 24: ತಮಿಳುನಾಡಿನ ತೂತುಕುಡಿಯಲ್ಲಿ ನಡೆದ ಪೊಲೀಸ್ ಗೋಲಿಬಾರ್ ಖಂಡಿಸಿ ಪ್ರತಿಭಟನೆ ನಡೆಸಿದ, ಎಸ್‌ಯುಸಿಐ(ಸಿ) ಪಕ್ಷದ ಕಾರ್ಯಕರ್ತರು, ಈ ಪ್ರಕರಣ ನ್ಯಾಯಾಂಗ ತನಿಖೆಗೊಳಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಗುರುವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು, ತೂತುಕುಡಿಯಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಂ.ಎನ್.ಶ್ರೀರಾಮ್, ತೂತುಕುಡಿಯ ಸ್ಟರ್ಲೈಟ್ ತಾಮ್ರ ಸಂಸ್ಕರಣಾ ಘಟಕ ಶಾಶ್ವತವಾಗಿ ಮುಚ್ಚುವಂತೆ ಮತ್ತು ಅದರ ವಿಸ್ತರಣಾ ಕಾರ್ಯ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಟ್ಯೂಟಿಕೊರಿನ್ ಸೇರಿ ಇನ್ನಿತರೆ ಗ್ರಾಮಸ್ಥರು ಸತತವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ, ಮೇ 22ರಂದು ನಡೆದ ಹೋರಾಟದ ವೇಳೆ ಗೋಲಿಬಾರ್ ನಡೆಸಿದ ಪರಿಣಾಮ ಅಮಾಯಕರು ಮೃತಪಟ್ಟಿದ್ದಾರೆ ಎಂದರು.
ಸ್ಟರ್ಲೈಟ್ ತಾಮ್ರ ಸಂಸ್ಕರಣ ಘಟಕದಿಂದ ಹೊರಬರುವ ವಿಷಕಾರಿ ಅನಿಲವು ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರಿಸರಕ್ಕೂ ಹಾನಿಯಾಗುತ್ತಿದೆ. ಪರಿಸರದ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಅಲ್ಲಿಯ ಜನರು ತೀವ್ರವಾದ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನ್ಯಾಯಾಲಯವು ಸ್ಟರ್ಲೈಟ್ ಕಂಪೆನಿಗೆ ದಂಡವನ್ನು ವಿಧಿಸಿ ಅದರ ಘಟಕಗಳನ್ನು ಮುಚ್ಚಬೇಕೆಂದು ಆದೇಶ ಹೊರಡಿಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ರಾಜ್ಯ-ಕೇಂದ್ರ ಸರಕಾರಗಳು, ಜಿಲ್ಲಾಡಳಿತ, ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆ ಎಲ್ಲವೂ ವೇದಾಂತ ಗ್ರೂಪ್ಸ್ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದ ಅವರು, ದುರ್ಘಟನೆಯಲ್ಲಿ ಮೃತರಾದ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಜ್ಞಾನಮೂರ್ತಿ, ಪಕ್ಷದ ಸದಸ್ಯ ಷಣ್ಮುಗಮ್, ಎನ್.ರಾಜಶೇಖರ್, ಐಶ್ವರ್ಯಾ ಸೇರಿ ಪ್ರಮುಖರು ಉಪಸ್ಥಿತರಿದ್ದರು.