ಬಿಎಸ್‌ವೈ, ಶ್ರೀರಾಮುಲು ವಿರುದ್ಧ ಎಸಿಬಿಗೆ ದೂರು
ಬೆಂಗಳೂರು, ಮೇ 24: ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸಾಬೀತು ವೇಳೆ ಬಿಜೆಪಿಯನ್ನು ಬೆಂಬಲಿಸುವಂತೆ ಶಾಸಕರಿಗೆ ಹಣದ ಆಮಿಷ ಒಡ್ಡಲಾಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶ್ರೀರಾಮುಲು ಸೇರಿದಂತೆ ಆರು ಮಂದಿ ವಿರುದ್ಧ ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಎಸಿಬಿಗೆ ದೂರು ನೀಡಿದ್ದಾರೆ.
ಶುಕ್ರವಾರ ನಗರದ ರೇಸ್‌ಕೋರ್ಸ್ ರಸ್ತೆಯ ಎಸಿಬಿ ಪ್ರಧಾನ ಕಚೇರಿಗೆ ಭೇಟಿ ನೀಡಿದ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಸೂರ್ಯ ಮುಕುಂದರಾಜ್, ಶಾಸಕರಿಗೆ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿ ಬಿ.ಎಸ್.ಯಡಿಯೂರಪ್ಪ, ಶ್ರೀರಾಮುಲು, ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ, ಯಡಿಯೂರಪ್ಪ ಪುತ್ರ ವಿಜಯೇಂದ್ರ, ಜನಾರ್ಧನರೆಡ್ಡಿ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದಾರೆ.
ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು ಮೇ 17ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಅಧಿವೇಶನದಲ್ಲಿ ಬಹುಮತ ಸಾಬೀತು ಪಡಿಸಲು ಶಾಸಕರು ಇಲ್ಲದ ಕಾರಣ, ಹಣದ ಆಮಿಷ ಒಡ್ಡಿ ಖರೀದಿಸಲು ಮುಂದಾಗಿದ್ದರು. ಈ ಬಗ್ಗೆ ಶಾಸಕರೇ ಬಿಜೆಪಿ ಮುಖಂಡರ ಜೊತೆಗೆ ಮಾತುಕತೆ ನಡೆಸಿರುವ ಸಾಕ್ಷಗಳಿವೆ. ಹೀಗಾಗಿ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ದೂರಿನಲ್ಲಿ ಹೇಳಲಾಗಿದೆ.
ಬಹುಮತ ಸಾಬೀತು ವೇಳೆ ಬಿಜೆಪಿ ಬೆಂಬಲಿಸುವಂತೆ ಹಣದ ಆಮಿಷ ಒಡ್ಡಿದ್ದಾರೆ. ಹೀಗಾಗಿ ಬಿಜೆಪಿ ಮುಖಂಡರ ವಿರುದ್ಧ ದೂರು ನೀಡಿದ್ದು, ಮೊಬೈಲ್ ಮೂಲಕ ಮಾತನಾಡಿರುವ ಧ್ವನಿ ಮುದ್ರಣ ಸಲ್ಲಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1998ರ ಅನ್ವಯ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.