ಸಿ.ಶಶಿಕಾಂತ್ ಸಹಾಯಕ ಸಾಲಿಸಿಟರ್ ಜನರಲ್ ಆಗಿ ನೇಮಕ
ಬೆಂಗಳೂರು, ಮೇ 24: ಹೈಕೋರ್ಟ್ ವಕೀಲ ಸಿ.ಶಶಿಕಾಂತ್ ಅವರನ್ನು ಸಹಾಯಕ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಲಾಗಿದೆ ಎಂದು ಕಾನೂನು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಈ ಮೊದಲು ಕೃಷ್ಣ ಎಸ್. ದೀಕ್ಷಿತ್ ಅವರು ಈ ಸ್ಥಾನದಲ್ಲಿದ್ದರು. ದೀಕ್ಷಿತ್ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾದ ಬಳಿಕ ಈ ಸ್ಥಾನ ಖಾಲಿ ಇತ್ತು. ಶಶಿಕಾಂತ್ ಅವರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಚಿಪ್ಪಲಿ ಗ್ರಾಮದವರು. 35 ವರ್ಷಗಳಿಂದ ವಕೀಲಿಕೆ ನಡೆಸುತ್ತಿದ್ದಾರೆ. 1975ರಲ್ಲಿ ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡು ಒಂದೂವರೆ ತಿಂಗಳ ಕಾಲ ಜೈಲುವಾಸವನ್ನೂ ಅನುಭವಿಸಿದ್ದರು. ಶಶಿಕಾಂತ್ ಆಗಿನ್ನೂ ಪಿಯುಸಿ ವಿದ್ಯಾರ್ಥಿಯಾಗಿದ್ದರು. ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ಇವರನ್ನು ಕಾಲೇಜಿನಿಂದ ಡಿಬಾರ್ ಮಾಡಲಾಗಿತ್ತು.
ಇದನ್ನು ಪ್ರಶ್ನಿಸಿ ಶಶಿಕಾಂತ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಕಾಲೇಜಿಗೆ ಪ್ರವೇಶ ಪಡೆದಿದ್ದರು. ಇವರ ಪರವಾಗಿ ಹೈಕೋರ್ಟ್‌ನಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯೂ ಆದ ಎನ್.ಸಂತೋಷ್ ಹೆಗ್ಡೆ ಹಾಗೂ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯೂ ಆಗಿರುವ ರಾಮಾ ಜೋಯಿಸ್ ವಾದ ಮಂಡಿಸಿದ್ದರು.